ಸಕಲೇಶಪುರ: ತಾಲೂಕು ಪಂಚಾಯಿತಿ ಇ.ಒ. ಹರೀಶ್ ಅವರ ಮೇಲೆ ಸುಳ್ಳು ಜಾತಿ ನಿಂದನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಕೂಡಲೇ ಸರ್ಕಾರ ಪ್ರಕರಣ ಹಿಂಪಡೆಯಬೇಕೆಂದು ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಒತ್ತಾಯಿಸಿದರು.
ಸುಳ್ಳು ಜಾತಿ ನಿಂದನೆ ಪ್ರಕರಣ ಹಿಂಪಡೆಯುವಂತೆ ಆಗ್ರಹ ಈ ಸಂಬಂಧ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಗೆ ಸಾಮರಸ್ಯ ಸಮಾಜ ನಿರ್ಮಾಣ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಜಯಕುಮಾರ್ ಮೇಲೆ ಇ.ಒ. ಹರೀಶ್ ಯಾವುದೇ ರೀತಿಯಲ್ಲಿ ಜಾತಿ ನಿಂದನೆ ಮಾಡಿಲ್ಲ. ಆದರೂ ಸಹ ಕೆಲವರ ಪಿತೂರಿಯಿಂದ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಕೆಲವರು ತಮ್ಮ ವೈಯುಕ್ತಿಕ ಹಿತಕ್ಕಾಗಿ ಸಮಾಜದ ಸಾಮರಸ್ಯವನ್ನು ಹದಗೆಡಿಸಲು ಯತ್ನಿಸುತ್ತಿದ್ದಾರೆ. ಅವರ ಮೇಲೆ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಹರೀಶ್ ಅವರು ಕೋವಿಡ್-19 ತಡೆಗಟ್ಟಲು ತಾಲೂಕಿನಾದ್ಯಾಂತ ಪ್ರವಾಸ ಮಾಡಿದ್ದರು. ಇದರಿಂದ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲು ಸಹಕಾರಿಯಾಗಿತ್ತು. ಆದರೆ, ಕೆಲವರು ಇವರ ಮೇಲೆ ಸುಳ್ಳು ಜಾತಿ ನಿಂದನೆ ದೂರು ದಾಖಲಿಸಿರುವುದು ಖಂಡನೀಯ ಎಂದರು.
ವೇದಿಕೆ ಅಧ್ಯಕ್ಷ ಕಿರಣ್ ಬಿಳುತಾಳ್, ಪ್ರಧಾನ ಕಾರ್ಯದರ್ಶಿ ಬಿ.ಡಿ ವಿಜಯ್, ತಾ.ಪಂ ಸದಸ್ಯರಾದ ಚೈತ್ರಾ, ಚಂದ್ರಮತಿ, ಕೆಂಪೇಗೌಡ ಯುವ ವೇದಿಕೆಯ ವಿಶಾಲ್ ಗೌಡ, ಅಶೋಕ್ ಇದ್ದರು.