ಬಳ್ಳಾರಿ :ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ರಾಯರಾಳು ತಾಂಡದ ದರ್ಶನ ಎಂಬ ಕ್ರೀಡಾಪಟು, ಹರಿಯಾಣ ಹಿಸಾರ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ರಾಷ್ಟ್ರಮಟ್ಟದ ಹಾಕಿ ಕ್ರೀಡೆಯಲ್ಲಿ 14ರ ಪೋರ ದರ್ಶನ ಕೃಷ್ಣನಾಯ್ಕ ಮತ್ತು ಲಕ್ಷ್ಮಿ ಬಾಯಿ ಅವರ ಮೂರನೇ ಮಗ. ಸದ್ಯ ದರ್ಶನ್ ಬಳ್ಳಾರಿಯ ರೇಡಿಯೋ ಪಾರ್ಕ್ನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಓದುವುದರ ಜೊತೆಗೆ ನಿರಂತರವಾಗಿ ಹಾಕಿ ಅಭ್ಯಾಸ ಮಾಡುವ ದರ್ಶನ್ ನಾಯ್ಕ, ಹಾಕಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ.
ದರ್ಶನ್ಗೆ ಮನೆಯಲ್ಲಿ ಬಡತನವಿದ್ದರೂ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ತರಬೇತಿ ಪಡೆಯುತ್ತಿದ್ದಾನೆ. ಈವರೆಗೆ ದರ್ಶನ್ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ರಾಜ್ಯಮಟ್ಟದ 14 ವರ್ಷದೊಳಗಿನ ಶಾಲಾ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಗೆ ಮೂರನೇ ಸ್ಥಾನ ಗಳಿಸಿದ್ದ. ಹಾಸನದಲ್ಲಿಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಪ್ರಾಥಮಿಕ ಹಂತದಲ್ಲಿಯೇ ಬಳ್ಳಾರಿ, ಬೆಂಗಳೂರು, ಮೈಸೂರು, ದಸರಾ ಹಬ್ಬದ ಟೂರ್ನ್ಮೆಂಟ್ಗಳಲ್ಲಿ ಹಾಕಿ ಪಂದ್ಯಾವಳಿಗಳನ್ನು ಆಡಿದ್ದಾನೆ.
ಈ ಬಗ್ಗೆ ಮಾತನಾಡಿರುವ ಹಾಕಿ ತರಬೇತಿದಾರರಾದ ಜಾಕೀರ್ ಹುಸೇನ್, ಸರ್ಕಾರದಿಂದ 2005ರಲ್ಲಿ ಗ್ರಾಮಾಂತರ ಅಥವಾ ಹಳ್ಳಿಗಳಿಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಆದೇಶ ಬಂದಿತ್ತು. ಆ ಸಮಯದಲ್ಲಿ ದರ್ಶನನನ್ನು ಆಯ್ಕೆ ಮಾಡಲಾಗಿತ್ತು. ನಂತರ ತನ್ನ ಸ್ವಯಂ ಆಸಕ್ತಿಯಿಂದ ಹಾಕಿ ಕ್ರೀಡೆಯಲ್ಲಿ ದರ್ಶನ್ ಮುಂದೆ ಬಂದಿದ್ದಾನೆ ಎಂದು ಹುಸೇನ್ ಹೇಳುತ್ತಾರೆ. ದರ್ಶನ್ಗೆ ಮುಂದಿನ ದಿನಗಳಲ್ಲಿ ಭಾರತದ ಹಾಕಿ ತಂಡದಲ್ಲಿ ಆಟವಾಡುವ ಅವಕಾಶ ಸಿಗಲಿ ಎಂದು ಹುಸೇನ್ ಹಾರೈಸಿದ್ದಾರೆ.