ಬಳ್ಳಾರಿ: ನಗರದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ರೀ-ಟೆಂಡರ್ ಕರೆದು ಮಹಾಯೋಜನೆಯನ್ನು ಪರಿಷ್ಕರಿಸಬೇಕು ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರಿಗೆ ಇಂದು ಮನವಿ ಸಲ್ಲಿಸಿದರು.
ಬಳ್ಳಾರಿ ನಗರ ಮಹಾಯೋಜನೆ ಪರಿಷ್ಕರಿಸುವಂತೆ ನಗರಾಭಿವೃದ್ಧಿ ಸಚಿವರಿಗೆ ಮನವಿ - ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಭೇಟಿ ಮಾಡಿ ಮಹಾಯೋಜನೆ ಪರಿಷ್ಕರಿಸುವಂತೆ ಮನವಿ ಮಾಡಿದರು.
ರಾಯಚೂರಿನಲ್ಲಿ ನಗರಾಭಿವೃದ್ಧಿ ಸಚಿವರನ್ನು ಭೇಟಿಯಾದ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಹಾ ಯೋಜನೆಯು 2010 ರಲ್ಲಿ ಅನುಮೋದನೆಗೊಂಡಿದ್ದು, ಸದರಿ ಮಹಾಯೋಜನೆಯ ಅವಧಿಯು 2021ರವರೆಗಿದ್ದು, ಬಳ್ಳಾರಿ ನಗರವು ಅಮೃತ್ ಯೋಜನೆಯಡಿ ಬರುತ್ತದೆ. ಸದರಿ ನಗರಕ್ಕೆ ಜಿ.ಐ.ಸ್ ಆಧಾರಿತ ಮಹಾಯೋಜನೆಯನ್ನು ಪರಿಷ್ಕರಿಸುವಲ್ಲಿ ಟೆಂಡರ್ ಅನುಮೋದನೆಗೊಂಡಿರುವುದು ಕಂಡು ಬಂದಿರುತ್ತದೆ ಎಂದು ತಿಳಿಸಿದರು.
ಬಳ್ಳಾರಿ ನಗರವು ಅತಿ ವೇಗದಲ್ಲಿ ಬೆಳವಣಿಗೆಯಾಗುತ್ತಿದ್ದು, ನಗರದ ಸುತ್ತಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೈಪಾಸ್ ರಸ್ತೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶ್ರೀಧರಗಡ್ಡೆ, ಕಪ್ಪಗಲ್ಲು, ಬೈರದೇವನಹಳ್ಳಿ, ಸಿರಿವಾರ, ಚಾಗನೂರು, ಅಮರಾಪುರ, ಗೋಡೆಹಾಳ್, ತೆಗ್ಗಿನ ಬೂದಿಹಾಳ್, ಬೊಬ್ಬುಕುಂಟೆ, ಬುರನಾಯಕನಹಳ್ಳಿ, ಕೋಳೂರು, ಸೋಮಸಮುದ್ರ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಹಾಗಾಗಿ ಈ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಸದರಿ ಗ್ರಾಮಗಳನ್ನು ಮಹಾಯೋಜನೆಯ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಪರಿಷ್ಕೃತ ಮಹಾಯೋಜನೆಯನ್ನು ತಯಾರಿಸುವಲ್ಲಿ ರೀ-ಟೆಂಡರ್ ಕರೆದು ಮಹಾಯೋಜನೆಯನ್ನು ಪರಿಷ್ಕರಿಸಬೇಕು ಎಂದು ಅವರು ಮನವಿ ಮಾಡಿದರು.