ಬಳ್ಳಾರಿ:ಅವರೇ ಆದಷ್ಟು ಬೇಗ ಮುಹೂರ್ತ ಫಿಕ್ಸ್ ಮಾಡಿಕೊಳ್ಳಲಿ, ನಮ್ಮ ಮುಹೂರ್ತ ಫಿಕ್ಸ್ ಆದರೆ. ಯಾವ ಪಾರ್ಟಿ ಇಂದ ಯಾರು ಬರುತ್ತಾರೆ ಆಮೇಲೆ ಗೊತ್ತಾಗುತ್ತದೆ. ಆದಷ್ಟು ಬೇಗ ಇವತ್ತು ಅಥವಾ ನಾಳೆ ಸಂಜೆಯೊಳಗೆ ಮುಹೂರ್ತ ಫಿಕ್ಸ್ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಭಾರತ್ ಜೋಡೊ ಯಾತ್ರೆ ನಿಮಿತ್ತ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಮೈದಾನವನ್ನು ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸೆಪ್ಟೆಂಬರ್ 30ರಿಂದ ರಾಜ್ಯಕ್ಕೆ ಜೋಡೋಯಾತ್ರೆ ಎಂಟ್ರಿಯಾಗಲಿದೆ. ಯಾತ್ರೆಯಲ್ಲಿ ನಾವು ಬಳ್ಳಾರಿಯಲ್ಲಿ ಮಾತ್ರ ಸಮಾವೇಶ ಹಮ್ಮಿಕೊಂಡಿದ್ದೇವೆ. ಎರಡು ದಿನ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಎಲ್ಲ ನಾಯಕರು ಪಕ್ಷಾತೀತವಾಗಿ ಬಂದು ಸಮಾವೇಶದಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಬೇಕು ಎಂಬ ಆಲೋಚನೆ ಇತ್ತು. ಆದರೆ, ಕ್ರೀಡಾಂಗಣ ಕಾಮಗಾರಿ ಕೆಲಸ ಇರುವುದರಿಂದ ಮುನಿಸಿಪಲ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಮುನಿಸಿಪಲ್ ಮೈದಾನ ಐತಿಹಾಸಿಕ ಮೈದಾನ ಈ ಹಿಂದೆ ಇಲ್ಲಿ ಇಂದಿರಾ ಗಾಂಧಿ ಅವರು, ಸೋನಿಯಾ ಗಾಂಧಿ ಅವರು ಸಮಾವೇಶ ನಡೆಸಿದ ಮೈದಾನ. ಹೀಗಾಗಿ ಈ ಮೈದಾನ ಆಯ್ಕೆ ಮಾಡಿಕೊಂಡಿದ್ದೇವೆ. ಮೈದಾನದಲ್ಲಿ ಕಡಿಮೆ ಜನ ಸೇರಲು ಅವಕಾಶ ಇದ್ದರೂ ಕೂಡ ಯಾತ್ರೆಯಲ್ಲಿ ಒಟ್ಟಾರೆಯಾಗಿ ಅಂದಾಜು ಐದು ಲಕ್ಷ ಜನ ಸೇರುತ್ತಾರೆ ಎಂದು ಅವರು ಹೇಳಿದರು.