ಕರ್ನಾಟಕ

karnataka

ETV Bharat / state

ಸಾಂಸ್ಕೃತಿಕ ಪರಂಪರೆ ಭೂತಕಾಲದ ಆಧಾರ ಸ್ತಂಭ, ಭವಿಷ್ಯದ ಮಾರ್ಗವಾಗಿದೆ: ಪ್ರಹ್ಲಾದ್​ ಜೋಶಿ - etv bharat kannada

ಸಂಸ್ಕೃತಿ ಎಂಬುದು ಕೇವಲ ಗುರುತಾಗದೇ ಜಾಗತಿಕ ಸಾಂಗತ್ಯವಾಗಿ ಮಾರ್ಪಡಿಸಿಕೊಳ್ಳಲು ಜಿ20 ಸಭೆ ಮಾರ್ಗವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

Cultural heritage is a pillar of the past says Prahlad Joshi in hampi
ಸಾಂಸ್ಕೃತಿಕ ಪರಂಪರೆಯು ಭೂತಕಾಲದ ಆಧಾರ ಸ್ತಂಭ ಮತ್ತು ಭವಿಷ್ಯದ ಮಾರ್ಗವಾಗಿದೆ: ಪ್ರಹ್ಲಾದ್​ ಜೋಶಿ

By

Published : Jul 10, 2023, 7:39 PM IST

Updated : Jul 10, 2023, 9:57 PM IST

ಹಂಪಿಯಲ್ಲಿ 3ನೇ ಜಿ20 ಸಾಂಸ್ಕೃತಿಕ ಕಾರ್ಯಕಾರಿ ತಂಡದ ಸಭೆ

ವಿಜಯನಗರ: ಸಂಸ್ಕೃತಿ ಎಂಬುದು ಕೇವಲ ಗುರುತಾಗದೇ ಜಾಗತಿಕ ಸಾಂಗತ್ಯವಾಗಿ ಮಾರ್ಪಡಿಸಿಕೊಳ್ಳಲು ಜಿ-20 ಸಭೆ ಮಾರ್ಗವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಆರಂಭಗೊಂಡ 3ನೇ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ತಂಡದ(ಸಿಡಬ್ಲ್ಯೂಜಿ) ಸಭೆಯನ್ನು ಇಂದು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕು ಪ್ರಮುಖ ಆದ್ಯತೆಗಳಾದ ಆಯಾ ದೇಶಗಳ ಕಲಾಕೃತಿಗಳನ್ನು ಮೂಲ ಸ್ಥಾನಕ್ಕೆ ಮರಳಿಸುವುದು, ಭಾರತದ ಆಯುರ್ವೇದ ಪದ್ಧತಿ ಪ್ರಮುಖ ಔಷಧಗಳ ಹಕ್ಕುಸ್ವಾಮ್ಯ(ಪೇಟೆಂಟ್) ಇತರರ ಪಾಲಾಗುವಿಕೆ ತಪ್ಪಿಸುವುದು, ಸ್ಥಾನಿಕ ಕಲಾಕೃತಿಗಳ ಪ್ರದರ್ಶನದ ಮೂಲಕ ಜಾಗತಿಕವಾಗಿ ಪ್ರಸ್ತುತತೆ ಜೊತೆಗೆ ಆರ್ಥಿಕ ಬಲವರ್ಧನೆ ಕೈಗೊಳ್ಳುವುದು ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಡಿಜಿಟಲ್ ರೂಪ ನೀಡುವ ಮೂಲಕ ಸಾಂಸ್ಕೃತಿಕ ಏಳಿಗೆ ಹೊಂದುವುದಾಗಿದೆ. ಈ ಮೂಲಕ ಪ್ರಮುಖ ಉದ್ದೇಶಗಳನ್ನು ಗುರುತಿಸಿ, ಅದರ ಕುರಿತಾಗಿ ಚರ್ಚಿಸಿ ಕ್ರಮ ಆಧಾರಿತ ಶಿಫಾರಸು ಪಡೆಯಲು ಮುಂದಾಗಬೇಕಿದೆ. ನೀತಿ ರಚನೆ ಹೃದಯಭಾಗದಲ್ಲಿ ಸಂಸ್ಕೃತಿ ಇರಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದರು.

ಸದಸ್ಯ ರಾಷ್ಟ್ರವಾಗಿರುವ ಭಾರತ ಕೇವಲ ಸಭೆಯಲ್ಲಿ ಭಾಗವಹಿಸುವಿಕೆ ಮಾತ್ರವಲ್ಲದೇ ಸಂಸ್ಕೃತಿಯ ಜಾಗತಿಕ ಬದಲಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವತ್ತ ದಿಟ್ಟ ಹೆಜ್ಜೆ ಇಡಲಿದೆ. ಏಕೀಕೃತ ಜಗತ್ತನ್ನು ಪ್ರದರ್ಶಿಸುವ, ಸಾಂಸ್ಕೃತಿಕ ಪರಂಪರೆಯು ಭೂತಕಾಲದ ಆಧಾರಸ್ತಂಭ ಮತ್ತು ಭವಿಷ್ಯದ ಮಾರ್ಗವಾಗಿದೆ. ವೈವಿಧ್ಯತೆಯಿಂದ ಕೂಡಿದ ಜಗತ್ತಿನಲ್ಲಿ, ಸಾಂಸ್ಕೃತಿಕ ಪರಂಪರೆಯ ಹಂಚಿಕೆ ಸರ್ವರನ್ನು ಬಂಧಿಸುವ ಎಳೆಯಾಗಿದೆ. ಸಭೆಯಲ್ಲಿ ಭಾಗವಹಿಸುವ ರಾಷ್ಟ್ರಗಳು ಏಕತೆಯ ಶಕ್ತಿ, ವೈವಿಧ್ಯತೆಯ ಸೌಂದರ್ಯ ಮತ್ತು ಮಾನವ ಅಭಿವೃದ್ಧಿಗಾಗಿ ಸಂಸ್ಕೃತಿ ಹೊಂದಿರುವ ಬೃಹತ್ ಸಾಮರ್ಥ್ಯವನ್ನು ಎಂದಿಗೂ ಸ್ಮರಿಸಬೇಕು ಎಂದು ಕರೆ ನೀಡಿದರು.

ಜಿ20 ಸಾಂಸ್ಕೃತಿಕ ಕಾರ್ಯಕಾರಿ ತಂಡದ ಮುಖ್ಯಸ್ಥ, ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಮಾತನಾಡಿ, ಯುನೆಸ್ಕೋ ವಿಶ್ವಪಾರಂಪರಿಕ ತಾಣವಾದ ಹಂಪಿ ಐತಿಹಾಸಿಕ ಇತಿಹಾಸವನ್ನು ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯ 14 ರಿಂದ 17ನೇ ಶತಮಾನದವರೆಗೂ ಆಳ್ವಿಕೆ ನಡೆಸಿದ ಭವ್ಯ ಇತಿಹಾಸವನ್ನು ಹೊಂದಿದ್ದು, ಈ ಭಾಗದಲ್ಲಿ ಸಾಂಸ್ಕೃತಿಕ ಹಿರಿಮೆಗಳ ಪ್ರತೀಕವಾದ ದೇವಾಲಯಗಳು, ಮಂಟಪಗಳು ಐತಿಹ್ಯವನ್ನು ಹೊಂದಿದೆ. ಜಾಗತಿಕ ಮಟ್ಟದ ಇತಿಹಾಸ ಹಾಗೂ ಸಂಸ್ಕೃತಿಯ ಖಜಾನೆಯಾಗಿದೆ. ಇಲ್ಲಿನ ಸಂಸ್ಕೃತಿಯ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರತೆ ಜೊತೆಗೆ ಉತ್ಪಾದಕತೆಗೆ ಜಾಗತಿಕವಾಗಿ ಆರ್ಥಿಕ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಭೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕ ಕೆ.ಕಿಶೋರ್ ಬಸಾ, ಕೇಂದ್ರ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲಿ ಪಾಂಡೆ, ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹಣಕಾಸು ಸಲಹೆಗಾರ್ತಿ, ರಂಜನಾ ಚೋಪ್ರಾ, ಕೇಂದ್ರ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ನಾಗರಾಜ ನಾಯ್ಡು ಉಪಸ್ಥಿತರಿದ್ದರು.

ಜಿ20 ಸಭೆಯಲ್ಲಿ ಗಿನ್ನೆಸ್ ದಾಖಲೆ, ಪ್ರಧಾನಿಯಿಂದ ಶ್ಲಾಘನೆ: 3ನೇ ಜಿ20 ಸಾಂಸ್ಕೃತಿಕ ಕಾರ್ಯಕಾರಿ ತಂಡದ ಸಭೆಯಲ್ಲಿ ಲಂಬಾಣಿ ಸಮುದಾಯಕ್ಕೆ ಸಂಬಂಧಿಸಿದ ಒಟ್ಟು 1755 ವಸ್ತುಗಳನ್ನು ಪ್ರದರ್ಶಿಸಿರುವುದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಇದು ಶ್ಲಾಘನೀಯವಾದ ಪ್ರಯತ್ನವಾಗಿದ್ದು, ಲಂಬಾಣಿ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸುತ್ತದೆ ಹಾಗೂ ಸಾಂಸ್ಕೃತಿಕ ಸಭೆಗಳಲ್ಲಿ ನಾರಿ ಶಕ್ತಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸಿಗಂದೂರು, ಹಸಿರುಮಕ್ಕಿ ಲಾಂಚ್‌ಗಳ ಸೇವೆ ಯಥಾಸ್ಥಿತಿಗೆ.. ನಿಟ್ಟುಸಿರು ಬಿಟ್ಟ ಪ್ರವಾಸಿಗರು, ಸ್ಥಳೀಯರು

Last Updated : Jul 10, 2023, 9:57 PM IST

ABOUT THE AUTHOR

...view details