ಬಳ್ಳಾರಿ:ಮಹಾಮಾರಿ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಗಣಿ ನಾಡಿನಲ್ಲಿ ಕೋವಿಡ್ ಸೋಂಕಿನ ಲಕ್ಷಣ ಇರುವವರೆಲ್ಲರಿಗೂ ಕೂಡಾ ಸಿಟಿ ಸ್ಕ್ಯಾನ್ ಕಡ್ಡಾಯ ಮಾಡಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಸಿಟಿ ಸ್ಕ್ಯಾನ್ ಸೆಂಟರ್ಗಳಲ್ಲಿ ಮನಸೋಇಚ್ಛೆ ಹಣ ವಸೂಲಿ ಮಾಡಲಾಗುತ್ತೆ ಎಂಬ ದೂರುಗಳು ಕೇಳಿ ಬಂದಿವೆ.
ಗಣಿ ನಾಡಿನಲ್ಲಿ ಗಗನಮುಖಿಯಾಗಿದೆ ಸಿಟಿ ಸ್ಕ್ಯಾನ್ ದರ: ಹಣ ದೋಚುತ್ತಿವೆ ಖಾಸಗಿ ಲ್ಯಾಬ್ಗಳು? - ಖಾಸಗಿ ಲ್ಯಾಬ್ಗಳು
ಕೊರೊನಾ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ಪರೀಕ್ಷೆಯಲ್ಲಿ ಒಮ್ಮೊಮ್ಮೆ ನೆಗೆಟಿವ್ ಬಂದರೂ ಕೂಡಾ ಸಿಟಿ ಸ್ಕ್ಯಾನ್ ಅವಶ್ಯಕತೆ ಇರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಖಾಸಗಿ ಸಿಟಿ ಸ್ಕ್ಯಾನ್ ಸೆಂಟರ್ಗಳು ಹಣ ದೋಚುವ ಮಾರ್ಗಗಳನ್ನು ಕಂಡುಕೊಂಡಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದರ ರಿಯಾಲಿಟಿ ಚೆಕ್ಗೆ ಹೊರಟ ಈಟಿವಿ ಭಾರತ ತಂಡಕ್ಕೆ ಖಾಸಗಿ ಲ್ಯಾಬ್ಗಳು ಸಿಟಿ ಸ್ಕ್ಯಾನ್ಗೆ ನಿಗದಿತ ದರವನ್ನು ಅಳವಡಿಸಿಕೊಳ್ಳದೇ ಇರುವುದು ಗಮನಕ್ಕೆ ಬಂದಿದೆ. ಆರ್ಟಿಪಿಸಿಆರ್ ಅಥವಾ ಆ್ಯಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದೋರಿಗೆ ಸಿಟಿ ಸ್ಕ್ಯಾನ್ ಮಾಡೋದ್ರಿಂದ ಕೊರೊನಾ ಪತ್ತೆಯಾಗುತ್ತೆ ಅನ್ನೋ ಕಾರಣದಿಂದ ಈಗ ಖಾಸಗಿ ಲ್ಯಾಬ್ಗಳು ದುಡ್ಡು ಮಾಡೋಕೆ ಹೊಸ ದಾರಿ ಹುಡುಕಿ ಕೊಂಡಿವೆ ಅನ್ನೋದು ಸಾರ್ವಜನಿಕರ ಆರೋಪವಾಗಿದೆ.
ಹಣವಿರುವ ಶ್ರೀಮಂತರು ಖಾಸಗಿ ಲ್ಯಾಬ್ಗಳಿಗೆ ತೆರಳಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದು, ಯಾವುದೇ ದರ ಪಟ್ಟಿಯನ್ನು ಅಲ್ಲಿ ನಿಗದಿ ಮಾಡಲಾಗಿಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಉಚಿತ ಪರೀಕ್ಷೆ ಮಾಡಲಾಗುತ್ತದೆ. ಈ ಬಗ್ಗೆ ಈಟಿವಿ ಭಾರತ ಖಾಸಗಿ ಲ್ಯಾಬ್ಗಳ ಮಾಲೀಕರನ್ನು ಸಂಪರ್ಕಿಸಲು ಯತ್ನಿಸಿದರೂ ಸಫಲವಾಗಲಿಲ್ಲ. ಏನಾದರೊಂದು ಕಾರಣ ಕೊಟ್ಟು ಮಾಲೀಕರು ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.