ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ ವಿಚಾರದಲ್ಲಿ ನಾನಾ ರೀತಿಯ ಅಪರಾಧ ಕೃತ್ಯಗಳು ನಡೆಯುತ್ತಲೇ ಇವೆ. ಬಳ್ಳಾರಿಯಲ್ಲಿ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳ ಮಧ್ಯೆ ಮದುವೆ ವಿಚಾರ ಬಂದಾಗ ಯುವಕ ಅನ್ಯಜಾತಿ ನೆಪವೊಡ್ಡಿ ಮದುವೆಗೆ ನಿರಾಕರಣೆ ಮಾಡಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಮೃತ ಯುವತಿ ಅಮೃತ ಕಳೆದ ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ್ದ ಆಮೃತಾ ಜುಲೈ 2 ರಂದು (ಭಾನುವಾರ ಸಂಜೆ) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಇನ್ನು ಈ ಪ್ರಕರಣ ಸಂಬಂಧ ಅಮೃತ ಸಾಯುವ ಮುಂಚೆ ಮಾಧ್ಯಮಗಳನೊಂದಿಗೆ ಮೃತಳ ತಾಯಿ ಶಾಂತಿ ಮಾತನಾಡಿ, ನಮ್ಮ ಹುಡುಗಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರೇಮ ವಿವಾಹ ಆಗಿದ್ದ ಇನ್ನೊಬ್ಬ ಯುವತಿ ಹಾಗು ಇವಳು ಫ್ರೆಂಡ್ಸ್ ಆಗಿದ್ದರು. ಆಕೆಗೆ ಲವ್ ಮ್ಯಾರೇಜ್ ಆದ ಕಾರಣ ಕಾಲೇಜು ಬಿಟ್ಟಿದ್ದಳು. ಬಳಿಕ ನಮ್ಮ ಮಗಳನ್ನು ಮನೆಗೆ ಕರೆಯುವುದು, ಕರೆದುಕೊಂಡು ಹೋಗುವುದು ಮಾಡುತ್ತಿದ್ದಳು.
ಈ ಸಂದರ್ಭದಲ್ಲಿ ಆ ಯುವತಿ ತನ್ನ ಮನೆಯವರನ್ನು ಪರಿಚಯ ಮಾಡಿಸಿ, ಆಕೆಯ ಪತಿಯ ಸಹೋದರ ಸುನೀಲ್ ನನ್ನು ಪ್ರೀತಿಸುವಂತೆ ಒತ್ತಾಯ ಮಾಡಿ ನನ್ನ ಮಗಳಿಗೆ ಹೇಳಿದ್ದಾಳೆ. ಪ್ರೀತಿ ಶುರುವಾದ ನಂತರ ಅಮೃತ ಮೇಲೆ ಆತನಿಂದ ದೈಹಿಕ ಸಂಪರ್ಕ ಕೂಡ ನಡೆದಿದೆ. ಬಳಿಕ ಇಬ್ಬರ ನಡುವೆ ಮದುವೆ ವಿಚಾರ ಬಂದಾಗ ನಮ್ಮ ಮನೆಯಲ್ಲಿ ಬೇರೆ ಹುಡುಗಿಯನ್ನು ನೋಡಿದ್ದಾರೆ, ನಾನು ಮದುವೆ ಆಗುವುದಿಲ್ಲ ಎಂದು ಅನ್ಯಜಾತಿ ನೆಪವೊಡ್ಡಿ ಮದುವೆಗೆ ಸುನೀಲ್ ನಿರಾಕರಿಸಿ ಮೋಸ ಮಾಡಿದ್ದಾನೆ. ಇದಾದ ನಂತರ ಮನನೊಂದು ನಾವು ಮನೆಯಿಂದ ಹೊರವಾಗಿದ್ದ ವೇಳೆ ನಮ್ಮ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳಿಗೆ ನ್ಯಾಯ ಸಿಗಬೇಕು. ಹೀಗಾಗಿ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾರಿಗೆ ನೌಕರ ಆತ್ಮಹತ್ಯೆ :ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರ ವಲಯದ ಮಾಗಡಿ ರಸ್ತೆಯಲ್ಲಿರುವ ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್ ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ನೌಕರನನ್ನು ಡ್ರೈವರ್ ಕಂ ಕಂಡಕ್ಟರ್ 48 ವರ್ಷದ ಮಲ್ಲನಗೌಡ ಬಡಿಗೇರ ಎಂದು ಗುರುತಿಸಲಾಗಿದೆ. ಮಲ್ಲನಗೌಡ ಒಂದು ವಾರದಿಂದ ರಜೆಯಲ್ಲಿದ್ದು, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಭಾನುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇಂದು ಡಿಪೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಹಲಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ..ಕಾಲೇಜಿಗೆ ಹೋಗುವಾಗ ಚಿಗುರಿದ ಪ್ರೀತಿ.. ಮದುವೆ ಸದ್ಯಕ್ಕೆ ಬೇಡ ಅಂದಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ