ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ತಗ್ಗಿದ ಕ್ರೈಂ ರೇಟ್: ತಹಬದಿಗೆ ಬಂದ ಕೌಟುಂಬಿಕ‌ ಕಲಹ - ಆಸ್ತಿ ವಿವಾದ

ಲಾಕ್​ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಹೊರಗೆ ಸುತ್ತಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಹೀಗಾಗಿ, ಗಂಭೀರ ಸ್ವರೂಪದ ಪ್ರಕರಣಗಳು ಮಾತ್ರ ಅಷ್ಟೊಂದು ಪ್ರಮಾಣದಲ್ಲಿ ಕಂಡುಬಂದಿಲ್ಲ ಎಂದು ಬಳ್ಳಾರಿ ಎಸ್​ಪಿ ಸೈದುಲು ಅಡಾವತ್ ಹೇಳಿದ್ದಾರೆ.

ಸೈದುಲು ಅಡಾವತ್, ಎಸ್ಪಿ
ಸೈದುಲು ಅಡಾವತ್, ಎಸ್ಪಿ

By

Published : Jun 25, 2021, 3:36 PM IST

ಬಳ್ಳಾರಿ:ಮಹಾಮಾರಿ ಕೊರೊನಾ ಎರಡನೇ ಅಲೆ ವ್ಯಾಪಕ ಆಗಿರುವ ಹಿನ್ನಲೆಯಲ್ಲಿ ಇಡೀ ರಾಜ್ಯವ್ಯಾಪಿ ಲಾಕ್​ಡೌನ್ ಜಾರಿಯಾಗಿತ್ತು. ಹೀಗಾಗಿ, ಕಳೆದ ಎರಡು ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ತಗ್ಗಿವೆ. ಕೌಟುಂಬಿಕ ಕಲಹ, ಆಸ್ತಿ ವಿವಾದ ಸೇರಿದಂತೆ ಇತರೆ ಗಲಾಟೆ- ದೊಂಬಿಗಳು ಜಿಲ್ಲೆಯಲ್ಲಿ ಕಡಿಮೆಯಾಗಿವೆ.

ಈ ಲಾಕ್​ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಹೊರಗೆ ಸುತ್ತಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಹೀಗಾಗಿ, ಗಂಭೀರ ಸ್ವರೂಪದ ಪ್ರಕರಣಗಳು ಮಾತ್ರ ಅಷ್ಟೊಂದು ಪ್ರಮಾಣದಲ್ಲಿ ಕಂಡುಬಂದಿಲ್ಲ. ಆದರೆ, ರಸ್ತೆ ಅಪಘಾತ ಮಾತ್ರ ನಿಂತಿಲ್ಲ. ಅಂಥಹ ಅಪಘಾತ ದಲ್ಲಿ ಸಾವು- ನೋವು ಜಾಸ್ತಿಯಾಗಿರೋದು ಮಾತ್ರ ಮೇಲ್ನೋಟಕ್ಕೆ ಕಂಡುಬಂದಿದೆ. ಅದು ಕೂಡ ಶೇ 10 ರ ಗಡಿಯನ್ನ ದಾಟಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ‌.

ಅಪಘಾತದಲ್ಲಿ ಸಂಭವಿಸುವ ಸಾವು- ನೋವನ್ನ ತಡೆಗಟ್ಟಲು ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಹಾಕದೇ ಇರುವ ಸವಾರರ ವಿರುದ್ಧ ಮುಲಾಜಿಲ್ಲದೇ ಕೇಸ್ ದಾಖಲಿಸಿ ಈ ಡೆತ್ ರೇಟನ್ನ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಈವರೆಗೂ ಅಂದಾಜು 2.5 ಲಕ್ಷ ಸವಾರರ ಮೇಲೆ ಕೇಸ್ ದಾಖಲಿಸಿ ದಂಡ ಶುಲ್ಕ ವಸೂಲಿ ಮಾಡಲಾಗಿದೆ‌.‌ ಕಳೆದ ವರ್ಷ ಅಂದಾಜು 1 ಲಕ್ಷ ಮಂದಿ ಸವಾರರ ಮೇಲೆ ಹಾಗೂ ಈ ವರ್ಷ ಅಂದಾಜು 1.5 ಲಕ್ಷ ಮಂದಿ ಬೈಕ್ ಸವಾರರ ಮೇಲೆ ಕೇಸ್ ದಾಖಲಿಸಲಾಗಿದೆ. ಆದರೂ, ರಸ್ತೆ ಅಪಘಾತ ಮಾತ್ರ ನಿಂತಿಲ್ಲ ಎಂದು ಎಸ್​ಪಿ ಸೈದುಲು ಅಡಾವತ್ ಹೇಳಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ​ ಸೈದುಲು ಅಡಾವತ್, ಕಳೆದ ಎರಡು ತಿಂಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿತ್ತು. ಪ್ರಮುಖ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿದ್ದವು. ಕಳೆದ ತಿಂಗಳಲ್ಲಿ ಅಂದಾಜು ಆರೇಳು ಮಂದಿ ಬಿದ್ದು ಸಾವನ್ನಪ್ಪಿದ್ದಾರೆ. ಅದು ಬಿಟ್ಟರೆ ರಾಬರಿ , ಕೌಟುಂಬಿಕ ಕಲಹ ಮತ್ತು ಆಸ್ತಿ ವಿವಾದ ಕೇಸ್​ಗಳು ಕಮ್ಮಿಯಾಗಿವೆ. ಲಾಕ್​ಡೌನ್ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಅಂದಾಜು 450 ಕೇಸ್​ಗಳನ್ನ ದಾಖಲಿಸಲಾಗಿದೆ. ಸರಿಸುಮಾರು 42 ಲಕ್ಷ ರೂ.ಗಳ ದಂಡ ಶುಲ್ಕ ವಸೂಲಿ ಮಾಡಲಾಗಿದೆ. ಈ ಬಾರಿ ಕೇವಲ 50 ದಿನಗಳಲ್ಲಿ ಅಂದಾಜು 658 ಕೇಸ್​ಗಳನ್ನ ದಾಖಲಿಸಿ ಸರಿ ಸುಮಾರು 60 ಲಕ್ಷಕ್ಕೂ ಅಧಿಕ ದಂಡ ಶುಲ್ಕ ವಸೂಲಿ‌ ಮಾಡಲಾಗಿದೆ ಎಂದರು.

ABOUT THE AUTHOR

...view details