ಗೃಹಜ್ಯೋತಿ, ಗೃಹಲಕ್ಷ್ಮಿ ಹೆಸರಲ್ಲಿ ಜನರಿಗೆ ಮೋಸದ ಆರೋಪ.. ಬಳ್ಳಾರಿಯಲ್ಲಿ ಓರ್ವ ವಶಕ್ಕೆ ಬಳ್ಳಾರಿ:ರಾಜ್ಯ ಸರ್ಕಾರವು ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಈ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆ ನೆಪ ಮಾಡಿಕೊಂಡು ಅಪ್ಲಿಕೇಶನ್ ಭರ್ತಿ ಮಾಡುವ ಹೆಸರಿನಲ್ಲಿ ನೂರಾರು ಜನರಿಂದ ಹಣ ಪಡೆದಿದ್ದಾನೆ ಎಂದು ಆರೋಪಿಸಿ, ವ್ಯಕ್ತಿಯೊಬ್ಬನನ್ನು ಜನರೇ ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ದಿಶಾ ಒನ್ ಎಂಬ ಖಾಸಗಿ ಏಜೆನ್ಸಿ ಹೆಸರಿನಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೇರಿದಂತೆ ಇತರ ಗ್ಯಾರಂಟಿ ಯೋಜನೆಗಳ ಫಾರ್ಮ್ ಭರ್ತಿ ಮಾಡುತ್ತೇನೆಂದು, ಬೆಂಗಳೂರು ಮೂಲದ ನಬೀರ್ ಹುಸೇನ್ ಎಂಬಾತ ಬಳ್ಳಾರಿಯ ಅಹಂಭಾವಿಯಲ್ಲಿ ಮನೆ ಮನೆಗೆ ಹೋಗಿ ಆನ್ಲೈನ್ನಲ್ಲಿ ಅರ್ಜಿ ಅಪ್ಲೋಡ್ ಮಾಡುವ ಭರವಸೆ ನೀಡಿ ಮಹಿಳೆಯರಿಂದ 150 ರಿಂದ 200 ರೂಪಾಯಿವರೆಗೆ ಪಡೆಯುತ್ತಿದ್ದ ಎನ್ನಲಾಗಿದೆ. ಅಲ್ಲದೇ, ದಿಶಾ ಒನ್ ಹೆಸರಿನಲ್ಲಿ ಬಿಲ್ ನೀಡುತ್ತಿದ್ದ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ಆರೋಪಿತ ವ್ಯಕ್ತಿ:ಇದರಿಂದ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು, ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಬಳ್ಳಾರಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ ನಬೀರ್ ಮಾತ್ರ ತಾನು ಜನರಿಗೆ ಮೋಸ ಮಾಡಿಲ್ಲ ಎಂದು ವಾದಿಸುತ್ತಿದ್ದಾನೆ. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಅರ್ಜಿಗಳನ್ನು ಅಪ್ಲೋಡ್ ಮಾಡಿದ್ದೇನೆ. ಎಲ್ಲರಿಗೂ ಸೈಬರ್ ಸೆಂಟರ್ಗೆ ಬಂದು ಅರ್ಜಿ ಸಲ್ಲಿಸಲು ಕಷ್ಟವಾಗುತ್ತದೆ. ಹೀಗಾಗಿ ನಾನೇ ಅವರಿದ್ದಲ್ಲಿಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಆರೋಪ ಎದುರಿಸುತ್ತಿರುವ ವ್ಯಕ್ತಿ ಹೇಳುತ್ತಿದ್ದಾನೆ.
ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಕೆ ಲಂಚ ಮುಕ್ತ:ಕೆಲವು ದಿನಗಳ ಹಿಂದೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಹಣ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದರು. "ಗ್ಯಾರಂಟಿ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೆಲವರು 200- 300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಗಿ ರದ್ದಾಗುತ್ತದೆ. ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ. ಈ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಲು ಹೋಗುವವರು ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ. ಯಾರಾದರೂ ಲಂಚ ಕೇಳಿದರೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಲಂಚ ಮುಕ್ತ ರಾಜ್ಯ ನಮ್ಮ ಗುರಿ" ಎಂದು ಅವರು ತಿಳಿಸಿದ್ದರು.
ಗೃಹಜ್ಯೋತಿ ನೊಂದಣಿ ಪ್ರಕ್ರಿಯೆ:ನೋಂದಣಿ ಪ್ರಕ್ರಿಯೆ ಸರಳೀಕರಣವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ವಿದ್ಯುತ್ ಬಿಲ್ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ. ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ.
ಇದನ್ನೂ ಓದಿ:ಸರ್ಕಾರ ಮತ್ತು ಸಂಘಟನೆಯಲ್ಲಿ ಬದಲಾವಣೆ: ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ.. ಕರ್ನಾಟಕ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ!