ಬಳ್ಳಾರಿ:ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಪಂದ್ಯಾವಳಿಯ ಫೀವರ್ ದೇಶದಲ್ಲಿ ಜೋರಾಗಿದೆ. ಐಪಿಎಲ್ ಹೆಸರಿನಲ್ಲಿ ಈಗ ಬೆಟ್ಟಿಂಗ್ ದಂಧೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಗಣಿ ಜಿಲ್ಲೆ ಬಳ್ಳಾರಿಯಲ್ಲೂ ಬೆಟ್ಟಿಂಗ್ ದಂಧೆ ಜೋರಾಗಿದೆ. ಐಪಿಎಲ್ ಪಂದ್ಯದ ಆರಂಭದಿಂದ ಹಿಡಿದು ಅಂತ್ಯದವರೆಗೂ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ನಗರ ಭಾಗಕ್ಕೆ ಸೀಮಿತವಾಗಿದ್ದ ಬೆಟ್ಟಿಂಗ್ ದಂಧೆ ಈಗ ಗ್ರಾಮೀಣ ಭಾಗವನ್ನೂ ಆವರಿಸಿಕೊಂಡಿದೆ. ಅದರ ಪರಿಣಾಮ ಯುವಕರು ಬೆಟ್ಟಿಂಗ್ ಹುಚ್ಚಿಗೆ ಬಿದ್ದು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು, ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿದ್ದಾರೆ. ಪೊಲೀಸರು ನಿತ್ಯ ದಾಳಿ ಮಾಡಿ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದರೂ ಜೂಜಿಗೆ ಮಾತ್ರ ಕಡಿವಾಣ ಬಿದ್ದಿಲ್ಲ.
ಮೊಬೈಲ್ ಮೂಲಕ ದಂಧೆ:ಇನ್ನು ಕೆಲವರು ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ಆಡುತ್ತಿರುವುದರಿಂದ ಜಾಲಕ್ಕೆ ತಡೆಯೊಡ್ಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪೊಲೀಸರ ಕೈಗೆ ಸಿಗುವವರೆಲ್ಲ ಸಾಮಾನ್ಯ ಬುಕ್ಕಿಗಳಾಗಿದ್ದು, ಬೆಟ್ಟಿಂಗ್ ಕಿಂಗ್‌ಪಿನ್ ಮತ್ತು ಪ್ರಮುಖ ಬುಕ್ಕಿಗಳ ಬಂಧನ ಸಾಧ್ಯವಾಗುತ್ತಿಲ್ಲ. ಯುವ ಸಮುದಾಯ ಹೆಚ್ಚಾಗಿ ಬೆಟ್ಟಿಂಗ್ ಗೀಳು ಬೆಳೆಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.