ಬಳ್ಳಾರಿ: ಜಿಲ್ಲೆಯ 11 ಲಸಿಕಾ ಕೇಂದ್ರಗಳಲ್ಲಿ ಇಂದು ಕೋವಿಡ್ ವ್ಯಾಕ್ರಿನ್ ಪ್ರಕ್ರಿಯೆ ಅತ್ಯಂತ ಸುಸೂತ್ರವಾಗಿ ಜರುಗಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಮೊದಲ ಸುತ್ತಿನಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ.
ಬಳ್ಳಾರಿಯಲ್ಲಿ 887 ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಜಿಲ್ಲೆಯಲ್ಲಿ ಕೋವಿಡ್ ಮಾಹಾಮಾರಿ ಸಂದರ್ಭದಲ್ಲಿ ಕೆಲಸ ನಿರ್ವಹಿಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮೆಚ್ಚುಗೆ ಗಳಿಸಿದ್ದ ಗ್ರೂಪ್ ಡಿ ಸಿಬ್ಬಂದಿ ಶಾಂತಕುಮಾರ್ಗೆ ಮೊದಲಿಗೆ ಲಸಿಕೆ ಹಾಕಿ ಚಾಲನೆ ನೀಡಲಾಯಿತು.11 ಲಸಿಕಾ ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ 100 ಆರೋಗ್ಯ ಸಿಬ್ಬಂದಿಯಂತೆ ಒಟ್ಟು 887 ಜನರಿಗೆ ಲಸಿಕೆ ನೀಡಲಾಗಿದೆ. ಗ್ರೂಪ್ ಡಿ ಸಿಬ್ಬಂದಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರಿಗೆ 28 ದಿನಗಳ ನಂತರ ಮತ್ತೆ ಎರಡನೇ ಡೋಸ್ ನೀಡಲಾಗುತ್ತದೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 19,432 ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದ್ದು, ನೋಂದಣಿ ಮಾಡಲಾಗಿದೆ ಎಂದರು.
ಲಸಿಕೆ ಪಡೆದ ಗ್ರೂಪ್ ಡಿ ಸಿಬ್ಬಂದಿ ಶಾಂತಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಎಡೆಬಿಡದೇ ಕೆಲಸ ನಿರ್ವಹಿಸಿದ್ದೆ. ಯಾವುದೇ ರೀತಿಯ ಸೋಂಕಿಗೊಳಗಾಗಿರಲಿಲ್ಲ. ಮುನ್ನಚ್ಚೆರಿಕೆ ಕ್ರಮವಾಗಿ ಹಾಗೂ ಸಹದ್ಯೋಗಿಗಳಲ್ಲಿ ಧೈರ್ಯ ಬರಲಿ ಮತ್ತು ಔಷಧಿ ಬಗ್ಗೆ ಅನಗತ್ಯ ಗೊಂದಲ ಮೂಡದಿರಲಿ ಎಂಬ ಉದ್ದೇಶದಿಂದ ಲಸಿಕೆ ಪಡೆದಿದ್ದೇನೆ ಎಂದರು.
ಲಸಿಕೆ ಪಡೆದುಕೊಂಡ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಮಾತನಾಡಿ ಲಸಿಕೆ ಸುರಕ್ಷಿತವಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲ. ಜನಸಾಮಾನ್ಯರು ಲಸಿಕೆ ಪಡೆದು ಕೊರೊನಾ ತೊಲಗುವ ಕಾಲ ಹತ್ತಿರವಾಗಿದೆ ಎಂದರು.