ಬಳ್ಳಾರಿ:ವೈದ್ಯರು ಸಲ್ಲಿಸುತ್ತಿರುವ ಸೇವೆ ಅಮೋಘವಾಗಿದೆ. ಸಾವಿನ ಪ್ರಮಾಣ ದಿಢೀರ್ ಏರಿಕೆ ಆದ ಕಾರಣ ಸೋತಿದ್ದೇವೆ ಎಂಬ ನಿರಾಶೆ ಬೇಡ. ಕೊರೊನಾ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ರೋಗಿಯೊಬ್ಬರ ವೈಯಕ್ತಿಕ ಕಾಳಜಿವಹಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಆ ಮೂಲಕ ಮರಣ ಪ್ರಮಾಣ ಕಡಿಮೆಗೊಳಿಸಲು ಮುಂದಾಗಬೇಕು ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದ್ ಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಕೋವಿಡ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಗಿಗಳ ಹತ್ತಿರ ಹಿರಿಯ ವೈದ್ಯರು ತೆರಳಿ ಚಿಕಿತ್ಸೆ ಕೊಡಬೇಕು. ಜಿಲ್ಲೆಯಲ್ಲಿ ಕೋವಿಡ್ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರ ಸೂಚಿಸಿದ ನಿಯಮಾವಳಿಗಳನ್ನು ಕಡ್ಡಾಯವಾಗಿ ಜಿಲ್ಲೆಯ ಜನರು ಸ್ವಯಂ ಪ್ರೇರಿತವಾಗಿ ಪಾಲಿಸಬೇಕು. ಅಂದಾಗ ಮಾತ್ರ ಈ ಕೋವಿಡ್ ಹರಡುವುದನ್ನು ತಡೆಗಟ್ಟಲು ಸಾಧ್ಯ. ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮ ಜೊತೆಗಿದೆ. ಯಾವುದೇ ರೀತಿಯ ತೊಂದರೆ, ವ್ಯವಸ್ಥೆ ಲೋಪ, ಹೇಳಿಕೊಳ್ಳಲಾಗದಿದ್ದ ಅಂಶಗಳಿದ್ದರೆ ಮುಕ್ತವಾಗಿ ಹಂಚಿಕೊಳ್ಳಿ. ಕೋವಿಡ್ ಚಿಕಿತ್ಸೆಗೆ ಬೇಕಾದ ಪರಿಕರಗಳು ಹಾಗೂ ಔಷಧಿಗಳು ಇನ್ನೂ ಅಗತ್ಯವಿದ್ದಲ್ಲಿ ಸಮರ್ಪಕವಾಗಿ ಒದಗಿಸಲಾಗುವುದು ಎಂದರು.