ಬಳ್ಳಾರಿ:ಜಿಲ್ಲಾದ್ಯಂತ ಚಿತ್ರಮಂದಿರಗಳು ಆರಂಭವಾಗಿವೆಯಾದರೂ ಪ್ರೇಕ್ಷಕರು ಮಾತ್ರ ಸುಳಿಯುತ್ತಿಲ್ಲ. ಚಿತ್ರಮಂದಿರಗಳು ಆರಂಭವಾಗಿ ಹತ್ತು ದಿನಗಳು ಕಳೆದರೂ ಕೇವಲ ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ ಬರುತ್ತಿದ್ದಾರೆ.
ಇದು ಗಣಿ ಜಿಲ್ಲೆಯ ಚಿತ್ರಮಂದಿರಗಳ ಮಾಲೀಕರಲ್ಲಿ ಬೇಸರ ಮೂಡಿಸಿದೆ. ಈ ಹಿಂದೆ ಚಲನಚಿತ್ರ ಮಂದಿರಗಳ ಮುಂದೆ ಕಿಕ್ಕಿರಿದು ಸಾಲು ಸಾಲಾಗಿ ಪ್ರೇಕ್ಷಕರು ನಿಲ್ಲುತ್ತಿದ್ದರು. ಆದ್ರೀಗ ಕೇವಲ 40-50 ಮಂದಿ ಪ್ರೇಕ್ಷಕರು ಮಾತ್ರ ಒಂದು ಶೋಗೆ ಬರುತ್ತಿದ್ದಾರೆ. ನಾಲ್ಕು ಶೋಗಳಿಗೆ ಅಂದಾಜು 200 ಮಂದಿ ಮಾತ್ರ ಚಿತ್ರಮಂದಿರಗಳತ್ತ ಸುಳಿಯುತ್ತಿದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕೋವಿಡ್-19 ಮಹಾಮಾರಿ.
ಚಿತ್ರಮಂದಿರಗಳು ಆರಂಭವಾದ್ರೂ ಹೆಚ್ಚಿದ ಪ್ರೇಕ್ಷಕರ ಕೊರತೆ ಜನರಲ್ಲಿ ಸೋಂಕಿನ ಭಯ ಇನ್ನೂ ಹೋಗಿಲ್ಲ. ಅಲ್ಲದೇ ಹೊಸ ಸಿನಿಮಾಗಳ ಬಿಡುಗಡೆ ಇಲ್ಲದ ಕಾರಣ ಅತ್ಯಂತ ನೀರಸವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಬಹುದೆಂದು ಚಲನಚಿತ್ರ ಮಂದಿರಗಳ ಮಾಲೀಕರ ಅಭಿಪ್ರಾಯವಾಗಿದೆ. ಇದಲ್ಲದೇ ಸಂಕ್ರಾಂತಿ ಹಬ್ಬಕ್ಕೆ ಹೊಸ ಸಿನಿಮಾಗಳು ಬಿಡುಗಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಆಗಲಾದ್ರೂ ಸಿನಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂಬ ಆಶಾಭಾವನೆಯಲ್ಲಿ ನಾವಿದ್ದೇವೆ ಎಂದು ಚಿತ್ರಮಂದಿರದ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
ಓದಿ:ಟಿಎಸ್ ನಂಬರ್ಗಾಗಿ ಬಳ್ಳಾರಿ ಜನರ ಪರದಾಟ: ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಇಲ್ವಂತೆ!
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ರಾಘವೇಂದ್ರ ಚಿತ್ರಮಂದಿರದ ವ್ಯವಸ್ಥಾಪಕ ಶರ್ಮಾಸ್ರು, ಕೋವಿಡ್-19 ಸೋಂಕಿನ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಸಿನಿಮಾ ಮಂದಿರದಲ್ಲಿ ಕಡ್ಡಾಯ ಮಾಡುತ್ತೇವೆ. ಸಿನಿಮಾ ಹಾಲ್ನಲ್ಲಿ ಒಂದು ಸೀಟಿನ ನಂತರದ ಸೀಟನ್ನು ಖಾಲಿಯಾಗಿಸಿ, ಮೂರನೇ ಸೀಟಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಆದ್ರೂ ಕೂಡ ಸಿನಿಮಾ ಮಂದಿರಗಳತ್ತ ಸಿನಿ ಪ್ರೇಕ್ಷಕರು ಸುಳಿಯುತ್ತಿಲ್ಲವೆಂದು ಹೇಳಿದ್ದಾರೆ.