ಬಳ್ಳಾರಿ: ಕೋವಿಡ್ ಸೋಂಕಿತರ ಸೇವೆಗೆ ಮುಂದಾಗಿರುವ ಜಿಲ್ಲೆಯ ಮೂರು ಖಾಸಗಿ ಆಸ್ಪತ್ರೆಗಳ ಮಾಲೀಕರ ಕಾರ್ಯಕ್ಕೆ ಜಿಲ್ಲೆಯ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ. ರೋಗದ ಲಕ್ಷಣ ಇರದ ಹಾಗೂ ಸೌಮ್ಯಯುತ (ಮೈಲ್ಡ್) ಕೋವಿಡ್ ಸೋಂಕಿತರಿಗೆ ತಮ್ಮ ಹೋಟೆಲ್ಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ರೋಗಿಗಳು ಸಹ ತಮಗೆ ದುಬಾರಿಯಾದರೂ ಪರವಾಗಿಲ್ಲ. ಸುಸಜ್ಜಿತ ಕೊಠಡಿ ಹಾಗೂ ಅಗತ್ಯ ಸೌಲಭ್ಯ ಹೊಂದಿರುವ ಹೋಟೆಲ್ಗಳೇ ಬೇಕು ಎಂದು ಬೇಡಿಕೆ ಇಡುತ್ತಿರುವುದು ಗಣಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅದನ್ನರಿತ ಜಿಲ್ಲಾಡಳಿತ ಸದ್ಯ ಮೂರು ಖಾಸಗಿ ಹೋಟೆಲ್ಗಳನ್ನು ಗುರುತಿಸಿದೆ.
ದಿನವೂ ತಲಾ 6 ಸಾವಿರದಂತೆ ಪ್ಯಾಕೇಜ್ ಅನ್ನು ಮಾಲೀಕರು (ಸರ್ಕಾರದ ಆದೇಶದ ಅನುಸಾರ) ಘೋಷಿಸಿದ್ದು, ಅದರಂತೆಯೇ ಸೋಂಕಿತರು ಹಣ ಪಾವತಿಸುತ್ತಿದ್ದಾರೆ. ಬಳ್ಳಾರಿಯ ಪೋಲಾ ಪ್ಯಾರಡೈಸ್, ಬಾಲಾ ರಿಜೆನ್ಸಿ ಹಾಗೂ ಕೋಲಾಚಲಂ ಕಾಂಪೌಂಡ್ನಲ್ಲಿರುವ ಸನ್ಮಾನ್ ಹೋಟೆಲ್ಗಳು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಿವೆ. ಹೊಸದಾಗಿ ಮೂರು ಖಾಸಗಿ ಹೋಟೆಲ್ಗಳು ಪರವಾನಗಿಗಾಗಿ ಅರ್ಜಿ ಸಲ್ಲಿಸಿವೆ.
ಕೋವಿಡ್ ಕೇರ್ ಸೆಂಟರ್ಗಳಾದರೂ ಹೋಟೆಲ್ ವಾತಾವರಣ ಇಲ್ಲಿ ಕಂಡು ಬರಲಿದೆ. ಸೋಂಕಿತರಿಗೆ ಯಾವುದೇ ಆತಂಕ ಇರುವುದಿಲ್ಲ. ಹೀಗಾಗಿ, ಇಲ್ಲಿನ ಸೋಂಕಿತರು ಬಹುಬೇಗನೆ ಗುಣಮುಖರಾಗಿ ಮನೆಗಳತ್ತ ಮುಖಮಾಡಲಿದ್ದಾರೆ. ಹಾಗೆಯೇ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪೋಲಾ ಪ್ಯಾರಡೈಸ್ ಹೋಟೆಲ್ ಮಾಲೀಕನ ಮಾತು ಈ ಕುರಿತು ಈಟಿವಿ ಭಾರತದೊಂದಿಗೆ ಪೋಲಾ ಪ್ಯಾರಡೈಸ್ ಹೋಟೆಲ್ ಮಾಲೀಕ ವಿಕ್ರಮ್ ಪೋಲಾ ಮಾತನಾಡಿ, ನಮ್ಮ ಹೋಟೆಲ್ನಲ್ಲಿರುವ 50 ಕೊಠಡಿಗಳ ಪೈಕಿ 40ರಲ್ಲಿ ಸೋಂಕಿತರಿದ್ದಾರೆ. ಈಗಾಗಲೇ 15 ಮಂದಿ ಬಿಡುಗಡೆಯಾಗಿದ್ದಾರೆ. 24 ಗಂಟೆಗಳ ಕಾಲ ವೈದ್ಯಕೀಯ ಸೇವೆ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸ್ಟಾಫ್ ನರ್ಸ್, ಯೋಗ-ಪ್ರಾಣಾಯಾಮ, ಇಬ್ಬರು ವೈದ್ಯರೊಂದಿಗೆ ಸಕಾಲದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ಪ್ರತ್ಯೇಕ ಕೊಠಡಿಯೊಂದಿಗೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.