ಹೊಸಪೇಟೆ: ಕೊರೊನಾ ವೈರಸ್ ಹಿನ್ನೆಲೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ದೇವರ ಜೋಡಿ ರಥೋತ್ಸವಕ್ಕೆ ಕೊರೊನಾ ಕರಿನೆರಳು ಬಿದ್ದಿದೆ.
ಪಟ್ಟಣದಲ್ಲಿ ಪ್ರತಿ ವರ್ಷದಂತೆ ಏಪ್ರಿಲ್ 2ರ ಶ್ರೀರಾಮ ನವಮಿಯಂದು ಅದ್ಧೂರಿಯಾಗಿ ಜೋಡಿ ರಥೋತ್ಸವ ಕಾರ್ಯಕ್ರಮ ನಡೆಯಬೇಕಿತ್ತು. ಕೊರೊನಾ ವೈರಸ್ ಹಾವಳಿಯಿಂದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯದ ಸರ್ಕಾರ ರದ್ದುಪಡಿಸಿದ ಹಿನ್ನೆಲೆ ಜನರಿಗೆ ಬೇಸರ ತಂದಿದೆ ಎಂದು ದೇವಾಲಯದ ಧರ್ಮಾಧಿಕಾರಿ ಸತ್ಯನಾರಾಯಣ ಹೇಳಿದ್ದಾರೆ.
ಯುಗಾದಿಯ ಪಾಢ್ಯದ ದಿನದಂದು ವಾಲ್ಮೀಕಿ ಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ಆಚರಣೆಗಳು ಹಾಗೂ ವಿಶೇಷ ಪೂಜೆಗಳು ಆರಂಭಗೊಳ್ಳುತ್ತಿದ್ದವು. ರಥೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಪಟ್ಟಣದ ಮೂಲಸ್ಥಳವಾದ ನಾರಾಯಣ ದೇವರಕೆರೆ (ನಾಣಿಕೆರೆ)1953ರಲ್ಲಿ ತುಂಗಭದ್ರಾ ಅಣೆಕಟ್ಟು ನಿರ್ಮಾಣದ ವೇಳೆಯಲ್ಲಿ ಮುಳುಗಡೆಯಾದ ನಂತರ ಅಲ್ಲಿನ ಜನ ತಮ್ಮ ಆರಾದ್ಯದೈವಗಳ ಸಮೇತ ಮರಿಯಮ್ಮನಹಳ್ಳಿಗೆ ಸ್ಥಳಾಂತರಗೊಂಡರು.
ಅಂದಿನಿಂದಲೂ ಕಿನ್ನಾಳದ ಆಗಮದ ಮನೆತನದವರು ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು 9 ದಿನಗಳ ಕಾಲ ನಡೆಸುತ್ತಿದ್ದಾರೆ. ಆದರೆ ಕೊರೊನಾ ನಿಯಂತ್ರಣಕ್ಕಾಗಿ, ಜಿಲ್ಲಾಧಿಕಾರಿಗಳು ಯಾವುದೇ ಜಾತ್ರೆ, ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ ನಡೆಸದಂತೆ ಆದೇಶವನ್ನು ಹೊರಡಿಸಿದ್ದಾರೆ.