ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯದ ಹಂತಕ್ಕೆ ತಲುಪಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಕೋವಿಡ್ -19 ತುರ್ತು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯದೊಳಗೆ ಈ ಸೋಂಕು ಹರಡಿಲ್ಲವಾದರೂ ಅದು ಕೇವಲ ಮೇಲ್ನೋಟಕ್ಕೆ ಕಾಣುತ್ತಿದೆಯಷ್ಠೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ನಾವು ಈಗ ಪರಿಹಾರ ಕಂಡುಕೊಳ್ಳಬೇಕಿದೆ. ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಜಿಲ್ಲಾಡಳಿತ ನಮಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದರೂ ಈ ಕೊರೊನಾ ಪೀಡಿತರ ಬಳಿ ಯಾರೂ ಹೋಗುತಿಲ್ಲ. ಹೀಗೆಂದು ನಮ್ಮ ಬಳಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದರು.
ಸಾರ್ವಜನಿಕರು ಯಾರೂ ಕೂಡ ಸರ್ಕಾರದ ನಿಯಮ ಪಾಲನೆ ಮಾಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಕೊರೊನಾ ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ. ವೈದ್ಯರು ಕೆಲವೊಂದು ಬಾರಿ ಅಸಹಾಯಕರಾಗಿದ್ದಾರೆ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ. ಸಾಮಾಜಿಕ ಅಂತರ ಮತ್ತು ಸ್ವಚ್ಚತೆ ಇಲ್ಲದೇ ಈ ಕೋವಿಡ್ ತಡೆ ಅಸಾಧ್ಯ. ವೈದ್ಯರಿಗೂ ಇದು ಹೊಸ ಸವಾಲಿನ ಸಂದರ್ಭ. 40 ವರ್ಷದ ಒಬ್ಬ ವ್ಯಕ್ತಿಗೆ ಮೊದಲು ಸ್ವ್ಯಾಬ್ ಟೆಸ್ಟ್ ನಡೆಸಿದಾಗ ನೆಗೆಟಿವ್ ಬರುತ್ತೆ. ನಂತರದಲ್ಲಿ ಪಾಸಿಟಿವ್ ಬಂದು ಅಷ್ಟರಲ್ಲೇ ಆ ವ್ಯಕ್ತಿ ಮೃತಪಡುತ್ತಾನೆ ಅಂದರೆ ಏನರ್ಥ. ಅಂತಹ ಅಸಹಾಯಕ ಸ್ಥಿತಿಯಲ್ಲಿ ವೈದ್ಯರಿದ್ದಾರೆ ಎಂದರು.
ಇನ್ನು ಮಾ.29 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 29 ಮಂದಿ ಸಾವನ್ನಪ್ಪಿದ್ದಾರೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬೇರೆ ಜಿಲ್ಲೆಗಳಲ್ಲಿ ಅವಲೋಕಿಸಿದರೇ ನಮ್ಮಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಕಡಿಮೆಯಿದೆ. ಆದರೆ, ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದರು.