ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ ಸಿಬ್ಬಂದಿ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ ಮತ್ತು ಕನಿಷ್ಠ 2 ಮೀಟರ್ ಸಾಮಾಜಿಕ ಅಂತರ ಕಾಪಾಡಿಕೊಂಡು ರೋಗ ನಿಯಂತ್ರಣ ಮಾಡಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪ ಮನವಿ ಮಾಡಿದ್ದಾರೆ.
ಮಾಸ್ಕ್-ಸಾಮಾಜಿಕ ಅಂತರದೊಂದಿಗೆ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ: ಆರೋಗ್ಯ ಶಿಕ್ಷಣಾಧಿಕಾರಿ ಮನವಿ - ಬಳ್ಳಾರಿಯಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮ
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೊಮ್ಮುವ ಸೂಕ್ಷ್ಮ ಕಣ ಆರೋಗ್ಯವಂತ ವ್ಯಕ್ತಿಗೆ ತಾಗಿದರೆ ಅವರಿಗೂ ವೈರಸ್ ಹರಡುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪ ಹೇಳಿದರು.
ನಗರದ ತೋರಣಗಲ್ಲಿನ ಜೆಎಸ್‍ಡಬ್ಲ್ಯೂ ಕಾರ್ಯನಿರ್ವಹಣಾ ಪ್ರದೇಶಗಳಾದ ಎಸ್.ಪಿ. ಪಿ.ಪಿ, ಸಿಸಿಟಿ ಹಾಗೂ ಡಿಆರ್ಐ, ಐಜಿಪಿಎಲ್ ಮುಂತಾದ ಘಟಕಗಳಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೊಮ್ಮುವ ಸೂಕ್ಷ್ಮ ಕಣ ಆರೋಗ್ಯವಂತ ವ್ಯಕ್ತಿಗೆ ತಾಗಿದರೆ ಅವರಿಗೂ ವೈರಸ್ ಹರಡುತ್ತದೆ. ಹೀಗಾಗಿ ಮನೆಯಲ್ಲಿ ಇರುವ ಚಿಕ್ಕ ಮಕ್ಕಳನ್ನು, ಗರ್ಭಿಣಿ, ಬಾಣಂತಿಯರನ್ನು ಹಾಗೂ 60 ವರ್ಷ ಮೇಲ್ಪಟ್ಟವರ ಬಗ್ಗೆ ವಿಶೇಷ ಕಾಳಜಿ ವಹಿಸಿ ರೋಗ ಹರಡದಂತೆ ಜಾಗೃತಿ ವಹಿಸಬೇಕು ಎಂದರು.
ಹೊಮ್ ಕ್ವಾರಂಟೈನ್‍ನಲ್ಲಿ ಇರುವವರು ಮನೆಯಿಂದ ಹೊರಗಡೆ ಓಡಾಡದಂತೆ ತಾವಾಗಿಯೇ ಸ್ವಯಂ ನಿಯಂತ್ರಣ ಮಾಡಿಕೊಂಡರೆ ಇತರರಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಯಾರಿಗಾದರೂ ಮೂಗು ಸೋರುವುದು, ತಲೆನೋವು, ಗಂಟಲು ನೋವು, ಒಣ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ಸಹಾಯಕ್ಕಾಗಿ ಜಿಲ್ಲಾಡಳಿತದ ಸಹಾಯವಾಣಿ 08392-277100 ಅಥವಾ 8277888866 ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು.