ಬಳ್ಳಾರಿ:ನಗರದ 20 ವಲಯಗಳಿಗೆ ಅಕ್ಟೋಬರ್ 1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಿರಂತರ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 24*7 ಕುಡಿಯುವ ನೀರು ಸರಬರಾಜನ್ನು ಮೊದಲ ಹಂತವಾಗಿ ನಗರದ 20 ವಲಯಗಳಿಗೆ ಸರಬರಾಜು ಮಾಡಬೇಕು. ಅದರ ಜತೆಗೆ ಹೊಸಪೇಟೆಯ 11 ವಲಯಗಳಿಗೂ ಸರಬರಾಜು ಮಾಡುವುದಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.
ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅಮೃತ್ ಯೋಜನೆ ಅಡಿ ಮೋಕಾ ಬಳಿ ಹೊಸದಾಗಿ ನಿರ್ಮಿಸಲಾಗುತ್ತಿರುವ 800 ಎಂಎಲ್‍ಡಿ ಕೆರೆಯ ಕಾಮಗಾರಿಯಲ್ಲಿ ಶೇ.50ರಷ್ಟನ್ನು ಬರುವ ಫೆಬ್ರುವರಿಯೊಳಗೆ ಪೂರ್ಣಗೊಳಿಸಿ ಎಂದರು. ಬಳಿಕ ಅಮೃತ ಸ್ಕೀಂ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಎಂಜನಿಯರ್ ದಿನೇಶ ಹಾಗೂ ದೊಡ್ಡಿಹಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ರಮೇಶ ಸೇರಿದಂತೆ ಎಂಜನಿಯರ್ಗಳು ಉಪಸ್ಥಿತರಿದ್ದರು.