ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಸಚಿವ ಬಿ. ಶ್ರೀರಾಮುಲು ಎಂದು ತಿಳಿಸಿದ್ದಾರೆ. ಬಳ್ಳಾರಿ ನಗರದ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಸೇವೆ ಮಾಡಿರುವೆ. ಈಗ ಮತ್ತೊಮ್ಮೆ ಅಲ್ಲಿಂದಲೇ ಸ್ಪರ್ಧೆ ಮಾಡುವೆ. ಈ ಬಗ್ಗೆ ಹೈಕಮಾಂಡ್‌ಗೂ ತಿಳಿಸಿದ್ದು, ಬಹುತೇಕ ಎಲ್ಲರ ಅಪೇಕ್ಷೆ ಮೇರೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ ಎಂದು ಹೇಳಿದರು.
ಅಧಿಕಾರ ಸಿಗುವ ಮುನ್ನವೇ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಚ್ಚಾಟದ ಮಧ್ಯೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತ. ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಡಿಕೆಶಿ ನಡುವೆ ಜಗಳ ನಡೆಯುತ್ತಿದೆ. ಇಬ್ಬರು ನಾಯಕರು ತಿರುಕನ ಕನಸು, ಹಗಲು ಕನಸು ಕಾಣುತ್ತಿದ್ದಾರೆ. ಉತ್ತರ ಕರ್ನಾಟಕ ಕಲ್ಯಾಣ, ಕರ್ನಾಟಕದಲ್ಲಿ ಕಾಂಗ್ರೆಸ್ ಬಗ್ಗೆ ಜನರು ಜಾಗೃತರಾಗಿದ್ದಾರೆ. ಕಾಂಗ್ರೆಸ್ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ಮತ್ತೊಮ್ಮೆ ಉಪ ಮುಖ್ಯಮಂತ್ರಿ ಅಗೋ ಕನಸನ್ನು ಬಿಚ್ಚಿಟ್ಟ ಶ್ರೀರಾಮುಲು:ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ನಮಗೆ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಸರ್ಕಾರ ರಚನೆ ಮಾಡಲು ಕಷ್ಟವಾಗಿತ್ತು. ಆದರೆ, ಈ ಬಾರಿ ನೂರಕ್ಕೆ ನೂರರಷ್ಟು ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಒಳ್ಳೆಯ ಅವಕಾಶ ನನಗೆ ಸಿಕ್ಕೇ ಸಿಗುತ್ತದೆ ಎಂದು ಹೇಳಿದ ಶ್ರೀರಾಮುಲು ಅವರು ಮತ್ತೊಮ್ಮೆ ಉಪ ಮುಖ್ಯಮಂತ್ರಿ ಅಗೋ ಕನಸನ್ನು ಬಿಚ್ಚಿಟ್ಟರು.