ಬಳ್ಳಾರಿ: ತಾಲೂಕಿನ ತಾಳೂರು ಗ್ರಾಮದಲ್ಲಿ ಕುಡಿಯುವ ನೀರನ್ನು ಶುದ್ಧಿಕರಿಸಿದೇ, ಕಲುಷಿತ ನೀರು ಸರಬಾರಜು ಮಾಡಿರುವ ಹಿನ್ನೆಲೆ ಕೆಲ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ಕುಡಿಯುವ ನೀರಿಗೆ ಕೆರೆ ಇದ್ದು, ಪ್ರತಿ ವರ್ಷ ಶುದ್ಧೀಕರಿಸಿದ ನೀರು ಸರಬರಾಜು ಆಗುತ್ತಿತ್ತು. ಆದರೆ ಈ ವರ್ಷ ಕೆರೆ ಸ್ವಚ್ಛಗೊಳಿಸಿಲ್ಲ. ನೇರವಾಗಿ ಕಾಲುವೆಯಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಿದ ಪರಿಣಾಮ ಹಲವರಲ್ಲಿ ರೋಗಗಳು ಕಾಣಿಸಿಕೊಂಡು ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ಹೇಳಲಾಗುತ್ತಿದೆ.
ಕೆಟ್ಟು ನಿಂತು ಶುದ್ಧೀಕರಣ ಘಟಕ: ತಾಳೂರು ಮತ್ತು ಊಳೂರು ಗ್ರಾಮಗಳಲ್ಲಿ ಮೂರು ನೀರಿನ ಶುದ್ಧೀಕರಣ ಘಟಕಗಳಿವೆ. ತಾಳೂರಿನ ಎರಡು ಘಟಕಗಳಲ್ಲಿ ಒಂದು ಘಟಕ ಕೆಟ್ಟಿದೆ. ಇನ್ನೊಂದು ಘಟಕಕ್ಕೆ ನೀರಿನ ಅಭಾವವಿದೆ. ಊಳೂರು ಶುದ್ಧೀಕರಣ ಘಟಕವೇ ಎಲ್ಲರಿಗೂ ಆಸರೆಯಾಗಿದೆ. ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಆಗ್ರಹಿಸಿದರೂ ಈವರೆಗೂ ರಿಪೇರಿ ಮಾಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.