ಬಳ್ಳಾರಿ :ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಜಿಲ್ಲಾದ್ಯಂತ ಭಾರೀ ಸದ್ದು ಮಾಡಿತ್ತು.
ಹಗರಿಬೊಮ್ಮನಹಳ್ಳಿ ಹಾಲಿ ಶಾಸಕ ಭೀಮಾನಾಯ್ಕ, ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಅವರ ನಡುವೆ ಏರ್ಪಟ್ಟ ವೈಮಸ್ಸಿನಿಂದಾಗಿ ನಿನ್ನೆ ಪುರಸಭೆ ಕಚೇರಿ ಮುಂದೆ ನೂಕಾಟ, ತೋಳ್ ತಟ್ಟಾಟದ ಪ್ರಹಸನ ನಡೆಯಿತು. ಇಷ್ಟೆಲ್ಲಾ ಹೈಡ್ರಾಮಾ ನಡೆದರೂ ಕೂಡ ಕೊನೆಗೂ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಹಗರಿಬೊಮ್ಮನಹಳ್ಳಿಯ ಪುರಸಭೆ ಸೇರಿತ್ತು.
ಅಚ್ಚರಿಯೇನೆಂದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿಯೇ ಕಾಂಗ್ರೆಸ್ ಪಾಲಾಗಿರೋದು ಕೂಡ ಇಲ್ಲಿಯ ವಿಶೇಷ.
ನೂಕಾಟ.. ತೋಳ್ ತಟ್ಟಾಟದ ನಡುವೆ ಕೈಪಾಲಾದ ಹಗರಿಬೊಮ್ಮನಹಳ್ಳಿ ಪುರಸಭೆ.. ಶಾಸಕ ಭೀಮಾನಾಯ್ಕ ಅವರ ಮತವೂ ಸೇರಿದಂತೆ ಕಾಂಗ್ರೆಸ್‌ನ ಕವಿತಾ ಹಾಲ್ದಾಳ್ ಅವರಿಗೆ 12 ಮತಗಳು ಬಂದವು. ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬೆಂಬಲಿಸಿದ ಹುಳ್ಳಿ ಮಂಜುನಾಥ ಸಹ 12 ಮತ ಗಳಿಸಿದ್ದರು. ಹೀಗಾಗಿ, ಅಧ್ಯಕ್ಷರಾಗಿ ಕವಿತಾ ಹಾಲ್ದಾಳ್ ಹಾಗೂ ಉಪಾಧ್ಯಕ್ಷರಾಗಿ ಹುಳ್ಳಿ ಮಂಜುನಾಥ ಅವರು ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ಶರಣವ್ವ ಘೋಷಣೆ ಮಾಡಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಬಿಜೆಪಿ ಸದಸ್ಯ ಮಾತಾ ಗ್ಯಾಸ್ ಏಜೆನ್ಸಿಯ ಯರಿಸ್ವಾಮಿ ಚುನಾವಣೆಗೆ ಬರಲಿಲ್ಲ. ಹಗರಿಬೊಮ್ಮನಹಳ್ಳಿ ಪುರಸಭೆ 23 ಸ್ಥಾನಗಳಲ್ಲಿ ಓರ್ವ ಸದಸ್ಯ ಮೃತನಾಗಿದ್ದರಿಂದ 22 ಸದಸ್ಯರ ಬಲವಿತ್ತು. ಕಾಂಗ್ರೆಸ್ 9, ಬಿಜೆಪಿ, ಜೆಡಿಎಸ್ ಇಬ್ಬರು ಸದಸ್ಯರನ್ನ ಹೊಂದಿದ್ದರೆ, ಐವರು ಪಕ್ಷೇತರರು ಜಯ ಗಳಿಸಿದ್ದರು.
ಇಲ್ಲಿ ಕಾಂಗ್ರೆಸ್ 3, ಜೆಡಿಎಸ್, ಪಕ್ಷೇತರ ಸೇರಿ ಎಲ್ಲೆಡೆ ಪಕ್ಷಾಂತರ ಆಗಿದೆ. ಕಾಂಗ್ರೆಸ್‌ನ 9 ಸದಸ್ಯರಲ್ಲಿ ಮೂವರು ಹೊರ ಬಂದು ಬಿಜೆಪಿ ಬೆಂಬಲಿಸಿದ್ದರೆ, ಬಿಜೆಪಿಯ ಓರ್ವ ಸದಸ್ಯೆ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜೆಡಿಎಸ್‌ನ ಇಬ್ಬರು ಸದಸ್ಯರಲ್ಲಿ ತಲಾ ಒಬ್ಬರು ಬಿಜೆಪಿ- ಕಾಂಗ್ರೆಸ್ ಬೆಂಬಲಕ್ಕಿದ್ದರು. ಐವರು ಪಕ್ಷೇತರರಲ್ಲಿ ಗುಂಪಿನಲ್ಲಿದ್ದರೆ, ಇನ್ನಿಬ್ಬರು ಬಿಜೆಪಿ ನೇತೃತ್ವದ ಗುಂಪನ್ನ ಬೆಂಬಲಿಸಿದ್ದರು.