ಹೊಸಪೇಟೆ :ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸ್ವಪಕ್ಷದವರೆ ಮುಂದೆ ನಿಲ್ಲುವ ಮೂಲಕ ಸಂಸದ ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಷಡ್ಯಂತ್ರ ಹೂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ಇಲ್ಲಿನ ಪಟೇಲನಗರದ ಬಿಜೆಪಿ ಕಚೇರಿಯಲ್ಲಿ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆರ್.ಆರ್.ನಗರದ ಚುನಾವಣೆಯು ಡಿಕೆಶಿ ಸಹೋದರರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಆದರೆ, ಆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನೇ ಸೋಲಿಸುವ ಮೂಲಕ ಶಿವಕುಮಾರ್ ಅವರನ್ನು ಕರ್ನಾಟಕದಲ್ಲಿ ತಲೆ ಎತ್ತದಂತೆ ಸ್ವಪಕ್ಷದವರು ಮಾಡುತ್ತಿದ್ದಾರೆ ಎಂದರು.