ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 'ವಿಜಯನಗರ ಉತ್ಸವ' ಮತ್ತು 'ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ'ವು ಇಂದು ಮತ್ತು ನಾಳೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರಣ್ಯ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ. ವೇದಿಕೆ ಮೇಲೆ ಕಣ್ಣು ಹಾಯಿಸಿದರೆ ಹಂಪಿ ಮಾತಂಗ ಪರ್ವತ ಹಾಗೂ ವಿರೂಪಾಕ್ಷೇಶ್ವರ ಗೋಪುರ ರಾಚುತ್ತದೆ. ವಿದ್ಯುತ್ ದೀಪಗಳಿಂದ ವೇದಿಕೆ ಝಗಮಗಿಸುತ್ತಿದೆ. ಅಲ್ಲದೇ, ಕ್ರೀಡಾಂಗಣದ ಸುತ್ತಲೂ ಹಂಪಿ ಕಲಾತ್ಮಕ ಚಿತ್ರಗಳನ್ನು ಅಳಪಡಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ 464 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕು ಸ್ಥಾಪನೆ ಕಾರ್ಯವನ್ನು ಸಿಎಂ ನೆರವೇರಿಸಲಿದ್ದಾರೆ.
ವೈವಿಧ್ಯಮಯ ಕಲೆ ಅನಾವರಣ:
ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯನಗರ ವೈಭವ ಮೆರವಣಿಗೆ ನಡೆಯಲಿದೆ. ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದೆ.