ಕಾವೇರಿ ನೀರು ಹಂಚಿಕೆ ವಿವಾದ: ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಸಿಎಂ ಒತ್ತಾಯ ಬಳ್ಳಾರಿ:ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಹೋಗುವ ದಾರಿಯಲ್ಲಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ 113 ಅಡಿ ನೀರು ಬಂದಿದೆ. ಹಾರಂಗಿ ಕಬಿನಿಯಲ್ಲಿ ನೀರು ಬರಬೇಕಿತ್ತು. ಆದರೆ ಮಳೆ ಕೊರತೆಯಿಂದ ನೀರಿನ ಕೊರತೆ ಕಾಡಿದೆ. ಮೇಕೆದಾಟು ವಿಚಾರವಾಗಿ ಅನಗತ್ಯ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
105 ತಾಲೂಕುಗಳಲ್ಲಿ ಶೀಘ್ರ ಬರ ಘೋಷಣೆ ಮಾಡಲಾಗುವುದು. ಈ ಸಂಬಂಧ ಸೆಪ್ಟೆಂಬರ್ 4ರಂದು ಸಚಿವ ಸಂಪುಟದ ಉಪ ಸಮಿತಿ ಸಭೆ ನಡೆಯಲಿದೆ. ಒಟ್ಟು 114 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ಆಗಿದೆ. 105 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗುವುದು. ನಂತರ 73 ತಾಲೂಕುಗಳ ಘೋಷಣೆಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ಒಂದು ದೇಶ ಒಂದು ಚುನಾವಣೆ ಜಾರಿ ಎಲ್ಲ ರಾಜ್ಯಗಳಿಗೆ ಕಷ್ಟ ಆಗಲಿದೆ ಎನ್ನುವುದು ನನ್ನ ವೈಯಕ್ತಿಕ ವಿಚಾರ. ವಿಧಾನಸಭೆ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನು ನಡೆಸುವುದು ಸುಲಭವಲ್ಲ. ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ನೇತೃತ್ವದ ಸಮಿತಿ ವರದಿ ನೀಡಲಿ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಆಗಸ್ಟ್ 29ರಿಂದ 15 ದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಲಾಗಿದೆ: ಸುಪ್ರೀಂ ಕೋರ್ಟ್‌ಗೆ ಕಾವೇರಿ ಪ್ರಾಧಿಕಾರದ ಮಾಹಿತಿ
ಡಿಸಿಎಂ ಡಿಕೆಶಿ ಹೇಳಿದ್ದೇನು?:ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕದ ಸದ್ಯದ ಪರಿಸ್ಥಿತಿಯನ್ನು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ನಿನ್ನೆ ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನೀರು ಬಿಡಬೇಕಾಗಿದ್ದನ್ನು ಹಿಂದೆ ಬಿಟ್ಟಿದ್ದೇವೆ. ನಮ್ಮ ರೈತರನ್ನು ನಾವು ಕಾಪಾಡಬೇಕು. ತಮಿಳುನಾಡಿನವರು ಬೆಳೆಗಳನ್ನು ಕಂಟ್ರೋಲ್ ಮಾಡುತ್ತಿಲ್ಲ. 93 ಟಿಎಂಸಿ ನೀರನ್ನು ಈ ಬಾರಿ ತಮಿಳುನಾಡು ಬಳಸಿಕೊಂಡಿದೆ. ಸಂಕಷ್ಟ ಸಮಯದಲ್ಲಿ ಎಷ್ಟು ಕಡಿಮೆ ಬಳಸಿಕೊಳ್ಳಬೇಕಿತ್ತೋ ಅದಕ್ಕಿಂತ ಹೆಚ್ಚು ಬಳಸಿಕೊಂಡಿದ್ದಾರೆ. ಈ ಅಂಶವನ್ನು ನಾವು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿದ್ದೇವೆ. ವಾಸ್ತವಾಂಶ ಬಂದು ನೋಡಿ ಅಂತ ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಪಕ್ಷದವರು ಹೇಳಿದಂತೆ ನೀರು ನಿಲ್ಲಿಸಲು ಆಗುವುದಿಲ್ಲ. ಕಾನೂನು ತಜ್ಞರ ಜೊತೆಗೆ ನಾನು ಮಾತನಾಡಿದ್ದೇನೆ. ಮಳೆ ಇಲ್ಲ, ಬರೀ ಬೆಂಗಳೂರಿಗೆ ಮಳೆ ಬಂದಿದೆ. ಕಾವೇರಿ ಬೇಸಿನ್ಗೆ ಮಳೆ ಬಂದಿಲ್ಲ. ಎರಡೂ ಕಮಿಟಿಗಳ ಮುಂದೆ ನಮ್ಮ ವಾದ ಮಂಡಿಸಲು ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಯಿಂದಲೇ 'ಕಾವೇರಿ ಹೋರಾಟ'ಕ್ಕೆ ಕರೆ ನೀಡಿದ ಮಾಜಿ ಸಿಎಂ ಹೆಚ್ಡಿಕೆ