ವಿಜಯನಗರ:ಐದು ವರ್ಷ ನಮ್ಮದೇ ಸರ್ಕಾರ ಇರಲಿದ್ದು, ನಾನೇ ಮುಂದುವರೆಯುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಹಂಪಿಯಲ್ಲಿ ಕರ್ನಾಟಕ ಸಂಭ್ರಮ 50ಕ್ಕೆ ಚಾಲನೆ ಹಾಗೂ ಇತರ ಕಾರ್ಯಗಳಿಗೆ ಹೊಸಪೇಟೆಗೆ ಸಿಎಂ ಆಗಮಿಸಿದ್ದರು.
ಈ ವೇಳೆ ಬದಲಾವಣೆ ವಿಚಾರದ ಪ್ರಶ್ನೆ ಮಾಡಿದ ಸುದ್ದಿಗಾರರಿಗೆ ಅವರು, "ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿ" ಎಂದು ಉತ್ತರಿಸಿದ್ದಲ್ಲದೇ, 5 ವರ್ಷ ನೀವೇ ಸಿಎಂ ಆಗಿರುತ್ತೀರಾ ಎನ್ನುವ ಪ್ರಶ್ನೆಗೆ "ನಾನೇ ಮುಂದುವರೆಯುವೆ, ಡಿಸಿಎಂ ವಿಚಾರವಾಗಿ ತೀರ್ಮಾನ ಮಾಡುವುದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನವಿದ್ದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ ಬಳಿಕವೇ ಆಗಲಿದೆ" ಎಂದು ಪ್ರತಿಕ್ರಿಯಿಸಿದರು.
ಸರ್ಕಾರ ಬೀಳುತ್ತೆ ಎನ್ನುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ''ಅವರು ಸೋತಿದ್ದಾರೆ. ಬೇರೆ ಕೆಲಸ ಇಲ್ಲದೇ ಬಾಯಿಗೆ ಬಂದಂತೆ ಮಾತಾಡ್ತಾನೆ. ರಾಜ್ಯದ ಜನ ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಬಿಜೆಪಿಯವರು ಭ್ರಮ ನೀರಸವಾಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದೇ ಇರಲು ಆಗುವುದಿಲ್ಲ. ಈ ಹಿಂದೆ ಆಪರೇಷನ್ ಮಾಡಿ ಯಶಸ್ಸು ಕಂಡಿದ್ದಾರೆ. ಮತ್ತೆ ಆಪರೇಷನ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗಲ್ಲ'' ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.
ಸಿಎಂಗೆ ಮಕ್ಕಳಿಂದ ಪ್ರೀತಿಯ ಸ್ವಾಗತ:ಹೊಸಪೇಟೆಯ ಬಾಲಕಿಯರ ಪದವಿಪೂರ್ವ ಕಾಲೇಜು, ಬಾಲಕಿಯರ ಪ್ರೌಢಶಾಲೆಗಳಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯರನ್ನು ಮಕ್ಕಳು ವಿಶೇಷವಾಗಿ ಸ್ವಾಗತಿಸಿದರು. ಮುಖ್ಯಮಂತ್ರಿಯವರಿಗೆ ಗುಲಾಬಿ ಹೂ ನೀಡಿ ವಿದ್ಯಾರ್ಥಿನಿಯರು ಸಂಭ್ರಮಿಸಿದರು. ಮಕ್ಕಳ ಜೊತೆಗೆ ಕೆಲ ಕಾಲ ಮಾತನಾಡಿದ ಸಿಎಂ, ಪಾಠ ಪ್ರವಚನ ಹೇಗೆ ನಡೆಯುತ್ತಿದೆ. ಸರ್ಕಾರದ ಸವಲತ್ತುಗಳನ್ನು ಸಿಕ್ತಿವೆಯಾ..? ಎಂದು ವಿಚಾರಿಸಿದರು.