ಹೊಸಪೇಟೆ: ವಿಜಯನಗರದ ಉಪ ಚುನಾವಣೆಯ ನಿಮಿತ ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆ 10: 30ಕ್ಕೆ ಕಮಲಾಪುರದ ಮಯೂರಿ ಹೋಟೆಲ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
ಹೊಸಪೇಟೆಯಲ್ಲಿ ನಾಳೆ ಸಿಎಂ ಪ್ರಚಾರ: ಆನಂದ್ ಸಿಂಗ್ ಪರ ಮತಯಾಚನೆ
ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಾಳೆ ಆಗಮಿಸಲಿದ್ದು, ಕಮಲಾಪುರದ ಮಯೂರ ಹೋಟೆಲ್ ಮೈದಾನದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅನರ್ಹ ಶಾಸಕ ಆನಂದ್ ಸಿಂಗ್ ಪರ ಮತಯಾಚಿಸಲಿದ್ದಾರೆ.
ಕಾರ್ಯಕ್ರಮದ ಸಿದ್ದತೆಯನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರವಿಕುಮಾರ್, ಸೋಮವಾರ ಬೆಳಗ್ಗೆ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಕುಂದುಕೊರತೆಗಳನ್ನು ಹಾಗೂ ಅವರ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದರು.
ಮಾಜಿ ಶಾಸಕ ಆನಂದ ಸಿಂಗ್ ಅವರನ್ನು ಕ್ಷೇತ್ರದ ಜನರು ಗೆಲ್ಲಿಸಬೇಕು. ಅವರ ತ್ಯಾಗದಿಂದ ಬಿಜೆಪಿ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಅವರ ಗೆಲುವಿಗಾಗಿ ದುಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಡಿಸಿಎಂ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಲ್ಲೆಯ ಸಂಸದ ದೇವಂದ್ರಪ್ಪ, ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಹಾಗೂ ಕನಕಗಿರಿ ಶಾಸಕ ಬಸವರಾಜ ದಡೇಸ್ಗೂರ ಉಪಸ್ಥಿತರಿರುತ್ತಾರೆಂದು ಮಾಹಿತಿ ನೀಡಿದರು.