ಬಳ್ಳಾರಿ/ಹುಬ್ಬಳ್ಳಿ:ಜನಬಲ ಮತ್ತು ಹಣಬಲದ ನಡುವೆ ಚುನಾವಣೆ ನಡೆಯುತ್ತಿದೆ. ಯಾವಾಗಲೂ ಜನ ಬಲವೇ ಗೆದ್ದಿದೆ. ಈ ಬಾರಿಯೂ ಜನ ಬಲವೇ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರವಾಗಿ ಸಿಎಂ ಬೊಮ್ಮಾಯಿ ಶನಿವಾರ ರೋಡ್ ಶೋ ನಡೆಸಿದರು.
ರೋಡ್ ಶೋ ನಗರದ ಗಡಗಿ ಚೆನ್ನಪ್ಪ ಸರ್ಕಲ್ ಮೂಲಕ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ ತಲುಪಿತು. ತಮಟೆ, ಡೊಳ್ಳು ಮೊದಲಾದ ವಾದ್ಯಗಳೊಂದಿಗೆ ಬಿಜೆಪಿ ಬಾವುಟಗಳನ್ನು ಬೀಸುತ್ತ, ಪಕ್ಷದ ಪರ, ಅಭ್ಯರ್ಥಿ ಪರ ಜಯ ಘೋಷ ಕೂಗುತ್ತಾ ಕಾರ್ಯಕರ್ತರು ಸಾಗಿದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಬ್ರೂಸ್‌ಪೇಟೆ ಬಳಿ ತೆರೆದ ವಾಹನದಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. "ಮೀಸಲಾತಿಯ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ನಾನು ಉತ್ತರ ಕರ್ನಾಟಕದ ಗಂಡು. ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ ಸಿಹಿ ಹಂಚಿದ್ದೇನೆ. ಕಾಂಗ್ರೆಸ್ ತಮ್ಮ ಸರ್ಕಾರ ಬಂದರೆ ಮೀಸಲಾತಿ ಹಿಂದಕ್ಕೆ ಪಡೆಯುತ್ತೇವೆ ಎನ್ನುತ್ತಾರೆ. ಇದಕ್ಕೆ ಜನತೆ ಬುದ್ಧಿ ಕಲಿಸುತ್ತಾರೆ. ಸಾಮಾಜಿಕ ನ್ಯಾಯ ಮುಟ್ಟಿದರೆ ಜನರು ಸಹಿಸುವುದಿಲ್ಲ" ಎಂದರು.
ಬಳ್ಳಾರಿ ಅಭಿವೃದ್ಧಿಗೆ ಕಂಕಣ ಬದ್ಧ:ಜೀನ್ಸ್ ಕ್ಯಾಪಿಟಲ್ ಮಾಡ್ತೀನಿ ಎಂದು ರಾಹುಲ್ ಘೋಷಣೆ ಮಾಡಿದ್ದಾರೆ. ಅವರ ತಾಯಿ ಗೆದ್ದು ಘೋಷಣೆ ಮಾಡಿದ 3 ಸಾವಿರ ಕೋಟಿ ರೂ. ಏನಾಯ್ತು?. ಈಗಾಗಲೇ ಜೀನ್ಸ್ ಅಪರೆಲ್ ಪಾರ್ಕ್ ಮಾಡಲು ಬಜೆಟ್ನಲ್ಲಿ ಹಣ ಮೀಸಲಿಟ್ಟಿದ್ದೇವೆ. ನಿಮ್ಮ ಆಶ್ವಾಸನೆ ಅಗತ್ಯ ಇಲ್ಲ. ಸರ್ಕಾರ ಬಳ್ಳಾರಿ ಅಭಿವೃದ್ಧಿಗೆ ಕಂಕಣ ಬದ್ಧವಾಗಿದೆ. ಬಳ್ಳಾರಿ ನಗರದಲ್ಲಿ 16 ಸಾವಿರ ಜನರಿಗೆ ಪಟ್ಟ ಕೊಟ್ಟಿದೆ. ಈ ಚುನಾವಣೆಯಲ್ಲಿ ಕೆಲವರು ಗೆಲ್ಲಬೇಕೆಂದು ಸ್ಪರ್ಧಿಸಿದರೆ, ಇನ್ನು ಕೆಲವರು ಸೋಲಿಸಬೇಕೆಂದು ಸ್ಪರ್ಧಿಸಿದ್ದಾರೆ. ಗೆಲ್ಲುವವರಿಗೆ ಜನರ ಆಶೀರ್ವಾದ ಇರಲಿ. ಸೋಮಶೇಖರ್ ರೆಡ್ಡಿ ಅವರಿಗೆ ಹನುಮಂತನ ಆಶೀರ್ವಾದವಿದೆ. ಅವರನ್ನು ಸೋಲಿಸಲು ಯಾರಿಂದಲೂ ಆಗಲ್ಲ. ಅವರು 'ಬಳ್ಳಾರಿ ಹುಲಿ' ಎಂದು ಸಿಎಂ ಬೊಮ್ಮಾಯಿ ಬಣ್ಣಿಸಿದರು. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದ ಬೊಮ್ಮಾಯಿ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ವಿವರಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.