ವಿಜಯನಗರ : ವಿಶ್ವವಿಖ್ಯಾತ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಂಪಿ ನಿರ್ವಹಣe ಪ್ರಾಧಿಕಾರ ಹಾಗೂ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ ನಡೆದಿದೆ. ಅಕ್ರಮವಾಗಿ ತಲೆಎತ್ತಿದ್ದ ಹೋಂ ಸ್ಟೇ, ಹೋಟೆಲ್, ರೆಸಾರ್ಟ್ಗಳು ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಸೋಮವಾರ ತೆರವು ಮಾಡಲಾಗಿದೆ. ಹಂಪಿಯ ಪ್ಲಾಟ್‌ಗಳಲ್ಲಿನ ಮನೆಗಳ ವಾಸ ಹೊರತುಪಡಿಸಿ, ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಬೀಗ ಹಾಕಲಾಗಿದೆ.
ಆಯುಕ್ತ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಡಿಎಸ್‌ಪಿ ವಿಶ್ವನಾಥ ಕುಲ್ಕರ್ಣಿ ಸೇರಿ ಇತರೆ ಅಧಿಕಾರಿಗಳು ಹಾಗು ಪೊಲೀಸರ ಭದ್ರತೆಯಲ್ಲಿ ಅನಧಿಕೃತ ಹೊಂ ಸ್ಟೇಗಳು, ವಾಣಿಜ್ಯ ಚಟುವಟಿಕೆಗಳ ಕಟ್ಟಡಗಳು ತೆರವು ನಡೆಯಿತು. ಕಟ್ಟಡಗಳ ತೆರವಿಗೆ ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದ್ದಂತೆ ಹೊಂ ಸ್ಟೇ ಮಾಲೀಕರು ಕಣ್ಣೀರು ಹಾಕಿದರು.
ಪ್ರವಾಸೋದ್ಯಮ ನಂಬಿಕೊಂಡಿದ್ದ ನಾವು ಇದರಿಂದ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಇದರ ಮೇಲೂ ಅಧಿಕಾರಿಗಳ ಕಣ್ಣು ಬಿದ್ದಿದೆ ಎಂದು ಇಲಾಖೆ ಅಧಿಕಾರಿಗಳು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಕೆಲವು ಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಕಟ್ಟಡಗಳನ್ನು ತೆರವು ಮಾಡಿದರು.
29 ಹಳ್ಳಿಗಳಲ್ಲಿ ತೆರವು ಕಾರ್ಯ :ಅನುಮತಿ ಇಲ್ಲದೇ 13 ಅನಧಿಕೃತ ರೆಸಾರ್ಟ್ಗಳನ್ನು ಹಂಪಿ ಪ್ರಾಧಿಕಾರ ಗುರುತಿಸಿತ್ತು. ತಾಲೂಕಿನ ಕಡ್ಡಿರಾಂಪುರ ಲಿಟಲ್ ಬನಾನಾ, ರಿಯಾಲೋಟಸ್, ನ್ಯಾಸಾನ್ವಿ, ಷಣ್ಮುಖ ಗೌಡ ಫಾಂಹೌಸ್, ಆರ್ಗನಿಕ್ ಕೆಫೆ, ಬನಾನಾ, ಶಂಕರ್ ಹೋಂಸ್ಟೇ, ಕಡ್ಡಿರಾಂಪುರ ಕ್ರಾಸ್‌ನ ಬಳಿಯ ಸಾಗರ್ ರೆಸ್ಟೋರೆಂಟ್ ಹಾಗೂ ಕಮಲಾಪುರದಲ್ಲಿನ ಮ್ಯಾಂಗೋಟ್ರೀ, ವೆಂಕಟಾಪುರದ ಶಿವಸಾಗರ್, ಪೈ ಸ್ಕೈ ಸೇರಿದಂತೆ ಹಂಪಿ ಸುತ್ತಮುತ್ತಲಿನ 29 ಹಳ್ಳಿಗಳಲ್ಲಿ ಇತರೆ ಹೋಂ ಸ್ಟೇ, ರೆಸಾರ್ಟ್, ಹೊಟೇಲ್‌ಗಳನ್ನು ಅಧಿಕಾರಿಗಳು ತೆರವು ಮಾಡಿಸಿದ್ದಾರೆ.