ಬಳ್ಳಾರಿ: ನಗರದಲ್ಲಿ ತ್ಯಾಜ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಮಹಾನಗರ ಪಾಲಿಕೆ, ಸ್ವೀಪಿಂಗ್ ಮಷಿನ್ ಮೂಲಕ ನಗರದ ರಸ್ತೆಗಳಲ್ಲಿ ಕಸವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ಮೂಲಕ ಸ್ವಚ್ಛ ಬಳ್ಳಾರಿ ಕಾರ್ಯಕ್ಕೆ ಮುಂದಾಗಿದೆ.
ಕಳೆದ ಕೆಲ ವರ್ಷಗಳಿಂದ ದುರಸ್ತಿಯಾಗಿ ಮೂಲೆ ಸೇರಿದ್ದ ಟಿಪಿಎಸ್ ಕಂಪನಿಯ ಕಸಗುಡಿಸುವ ಯಂತ್ರವನ್ನು ತ್ವರಿತಗತಿಯಲ್ಲಿ ರಿಪೇರಿ ಮಾಡಿಸಿ ರಸ್ತೆಗೆ ಬಿಡಲಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ರಾತ್ರಿ ಸಮಯದಲ್ಲಿ ಸ್ವೀಪಿಂಗ್ ಮಷಿನ್ ಮೂಲಕ ಕಸ ಗುಡಿಸುವ ಕಾರ್ಯ ಮಂಗಳವಾರದಿಂದಲೇ ನಗರದ ವಿವಿಧ ರಸ್ತೆಗಳಲ್ಲಿ ಆರಂಭವಾಗಿದೆ. ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರೇ ಖುದ್ದಾಗಿ ನಗರದ ವಿವಿಧ ರಸ್ತೆಗಳಲ್ಲಿ ಸ್ವೀಪಿಂಗ್ ಯಂತ್ರದ ಮೂಲಕ ಕಸ ಗುಡಿಸುವ ಕಾರ್ಯವನ್ನು ಪರಿಶೀಲಿಸಿದರು.