ಬಳ್ಳಾರಿ: ಕೋವಿಡ್-19 ಹಿನ್ನೆಲೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್. ಮಲ್ಲೂರ್ ಅವರು ನಗರದ ವಿವಿಧ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ತಂಗಿರುವ ಸ್ಥಳಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಲಿ ಕಾರ್ಮಿಕರ ನೆಲೆಗಳಿಗೆ ಭೇಟಿ ನೀಡಿ ಅಭಯ ನೀಡಿದ ಸಿವಿಲ್ ನ್ಯಾಯಾಧೀಶ - Covid-19
ಹಿರಿಯ ಸಿವಿಲ್ ನ್ಯಾಯಾಧೀಶ ರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್. ಮಲ್ಲೂರ್ ಅವರು ನಗರದ ವಿವಿಧ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ತಂಗಿರುವ ಸ್ಥಳಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಂತರ ಅಲ್ಲಿನ ಬಡ ಜನರಿಗೆ ಲಾಕ್ಡೌನ್ ಮುಗಿಯುವವರೆಗೂ ನೆರವಾಗುವುದಾಗಿ ಅಭಯ ನೀಡಿದರು.
ಮೊದಲಿಗೆ ಸರ್ಕಾರಿ ಅತಿಥಿಗೃಹದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾಡಳಿತದ ಸಂಕೀರ್ಣದಲ್ಲಿದ್ದ ಕಾರ್ಮಿಕರನ್ನು ಭೇಟಿಯಾಗಿ ಅಲ್ಲಿ ಗುತ್ತಿಗೆದಾರರು ಕಾರ್ಮಿಕರಿಗೆ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಆನಂತರ ಅವರು ಮುಂಡರಗಿ ಬಳಿ ನಿರ್ಮಿಸಲಾಗುತ್ತಿರುವ ಆಶ್ರಯ ಬಡಾವಣೆಯಲ್ಲಿದ್ದ ಕಾರ್ಮಿಕರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿ ಕಾರ್ಮಿಕರಿಗೆ ಶೌಚಾಲಯ ಮತ್ತು ಅಗತ್ಯ ಸೌಕರ್ಯ ಕಲ್ಪಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಕೋವಿಡ್-19 ಹಿನ್ನೆಲೆ ಕಾರ್ಮಿಕರು ಚಿಂತಿತರಾಗುವುದು ಬೇಡ. ತಾವು ಅರಾಮವಾಗಿ ಇಲ್ಲಿಯೇ ಇರಿ ತಮಗೆ ಬೇಕಾದ ಅಗತ್ಯ ವಸತಿ, ಊಟ ಹಾಗೂ ಇನ್ನಿತರ ಸೌಕರ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ. ಇನ್ನೂ ತಮಗೆ ತೊಂದರೆಗಳಿದ್ದಲ್ಲಿ ಇನ್ನೂ ಎರಡ್ಮೂರು ದಿನಗಳಲ್ಲಿ ನಾವು ಮತ್ತೆ ಪರಿಶೀಲನೆಗೆ ಆಗಮಿಸಲಿದ್ದು, ನಮ್ಮ ಗಮನಕ್ಕೆ ತನ್ನಿ ಎಂದು ಆಶ್ವಾಸನೆ ನೀಡಿದರು.