ಬಳ್ಳಾರಿ : ಚಲನಚಿತ್ರ ಮಂದಿರದ ವಾಚ್‌ಮ್ಯಾನ್ ಕೊಲೆ ಪ್ರಕರಣದ ಅಪರಾಧಿಗಳಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣ ಹಿನ್ನೆಲೆ: ಬಳ್ಳಾರಿ ನಗರದ ರಾಘವೇಂದ್ರ ಚಲನಚಿತ್ರ ಮಂದಿರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬ ವ್ಯಕ್ತಿಯ ಕೊಲೆ 2016ರ ನ. 22ರ ಮಧ್ಯರಾತ್ರಿ ನಡೆದಿತ್ತು. ಸಿನಿಮಾ ನೋಡಲು ಬಂದಿದ್ದ ಕೊಳಗಲ್ಲು ಗ್ರಾಮದ ಮೌನೇಶ್, ಪಾಲೂತ್ತೂರು ನಾಗೇಶ್ ಹಾಗೂ ಅಡವಿಸ್ವಾಮಿ ಎಂಬ ಮೂವರು ಟಿಕೆಟ್ ಸಿಗದ ಹಿನ್ನೆಲೆ ವೆಂಕಟೇಶ್ ಜೊತೆ ಅವಾಚ್ಯ ಪದಗಳಿಂದ ನಿಂದಿಸಿ ಜಗಳವಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿತರು ನಂತರ ಮಧ್ಯರಾತ್ರಿ ಥಿಯೇಟರ್‌ಗೆ ಬಂದು ಮಲಗಿದ್ದ ವೆಂಕಟೇಶ್‌ನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.
ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಿದ್ದ ಬ್ರೂಸ್ ಪೇಟೆ ಪೊಲೀಸರು ಅಪರಾಧಿಗಳ ವಿರುದ್ಧ ಸಾಕ್ಷಿಗಳನ್ನು ಸಂಗ್ರಹಿಸಿ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮೊಕದ್ದಮೆಯ ಪರ-ವಿರೋಧ ಆಲಿಸಿದ ನ್ಯಾಯಾಧಿಶೆ ಎಸ್.ಎಚ್ ಪುಷ್ಪಾಂಜಲಿದೇವಿ ಅವರು ಗುರುವಾರದಂದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 90 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಪರಾಧಿಗಳಲ್ಲಿ ಒಬ್ಬನಾದ ಪಾಲೂತ್ತೂರು ನಾಗೇಶ್ ಈಗಾಗಲೇ ಮೃತಪಟ್ಟಿದ್ದಾನೆ.
ಮಗಳನ್ನು ಕೊಲೆ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ :ಇನ್ನೊಂದೆಡೆ ಹೆತ್ತ ಮಗಳನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದ ಪಾಪಿ ತಂದೆಗೆ 10 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲೆಯ ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಜುಲೈ 5-2023) ಆದೇಶ ನೀಡಿತ್ತು. ಅಥಣಿ ತಾಲೂಕಿನ ಮಂಗಸೂಳಿ ಮಲ್ಲಾರವಾಡಿ ಗ್ರಾಮದ ಬಸವರಾಜ ಮಗದುಮ್ಮ(35) ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.
ಕಳೆದ 9 ಜೂನ್ 2016ರಲ್ಲಿ ಬಸವರಾಜ ಮಗದುಮ್ಮ ಎಂಬ ವ್ಯಕ್ತಿ ತನ್ನ ಮಗಳಾದ ಸಂಗೀತಾ ಬಸವರಾಜ ಮಗದುಮ್ಮ(7)ಳನ್ನು ಅಪ್ಪಾ ಸಾಹೇಬ ಶಿಂಧೆ ಎಂಬುವವರ ಶೆಡ್ ನಲ್ಲಿ ಯಾರೂ ಇಲ್ಲದ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದ. ಹೆತ್ತ ಮಗಳ ಶಿಕ್ಷಣಕ್ಕೆ ಹಣಕಾಸಿನ ನೆರವಿಗೆ ಮತ್ತು ಮಗಳನ್ನು ಸಾಕಲು ಆಗುವುದಿಲ್ಲ ಎಂದು ಆರೋಪಿ ಬಾಲಕಿಯನ್ನು ಕೊಲೆ ಮಾಡಿದ್ದ. ಈ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಥಣಿ ಸಿಪಿಐ ಎಸ್.ಎಚ್.ಶೇಖರಪ್ಪ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್ ಎಲ್ ಚೌಹಾಣ್ ಅವರು ಆರೋಪಿ ಬಸವರಾಜ ಮಗದುಮ್ಮಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದರು. ಪ್ರಕರಣದ ಸಂಬಂಧ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ. ಜಿ ತುಂಗಳ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ:ಮಗಳನ್ನು ಕೊಲೆ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ: ಚಿಕ್ಕೋಡಿ ಕೋರ್ಟ್ನಿಂದ ಮಹತ್ವದ ತೀರ್ಪು..!