ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮ ಹೊರವಲಯದ ಹಾಗಲೂರು ಗುಡ್ಡಗಾಡು ಪ್ರದೇಶದಲ್ಲಿರುವ ಮೂರು ಎಕರೆ ಭೂಮಿಯಲಿ ಸಿಜೆಂಟಾ ತಳಿಯ ಮೆಣಸಿನಕಾಯಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಆ ಬೆಳೆನಾಶಕ್ಕೆ ರೈತನೋರ್ವ ಮುಂದಾಗಿದ್ದಾನೆ.
ಮೆಣಸಿನಕಾಯಿ ಬೆಳೆಗೆ ಬಂಪರ್ ದರ ಇದ್ದರೂ ಕೂಡ ಜಿಲ್ಲೆಯ ಮೆಣಸಿಕಾಯಿ ಬೆಳೆಗಾರರಲ್ಲಿ ಮಾತ್ರ ಒಂದಲ್ಲ ಒಂದು ರೀತಿಯ ಆತಂಕ ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ರೈತ ಹೊನ್ನೂರಪ್ಪ ಎಂಬುವರು ತನ್ನ 3 ಎಕರೆಯಲ್ಲಿ ಬೆಳೆದ ಸಿಜೆಂಟಾ 2043 ತಳಿಯ ಮೆಣಸಿನಕಾಯಿ ಬೆಳೆಯನ್ನ ನಾಶಪಡಿಸಲು ಮುಂದಾಗಿದ್ದಾರೆ.
ಯಾಕಂದ್ರೆ, ಈ ಸಿಜೆಂಟಾ ತಳಿಯ ಬೆಳೆಯಿಂದಾಗಿ ಉತ್ತಮ ಫಸಲೇನೋ ಬಂದಿತ್ತಾದ್ರೂ, ಇತ್ತೀಚೆಗೆ ಸುರಿದ ಮಳೆ ಹಾಗೂ ವಾತಾವರಣದಲ್ಲಿನ ಏರುಪೇರು ಉಂಟಾದ ಪರಿಣಾಮ ಇಡೀ ಬೆಳೆಗೆ ಮಜ್ಜಿಗೆ ರೋಗ ಬಾಧೆಯು ಕಾಣಿಸಿದೆ. ಗಿಡದಲ್ಲಿಯೇ ಹಸಿರು ಬಣ್ಣದ ಮೆಣಸಿನಕಾಯಿಗಳು ಬಾಡಿದ ಹಾಗೂ ಒಣಗಿದ ಮತ್ತು ಕೊಳೆತ ಸ್ಥಿತಿಯಲ್ಲಿ ಜೋತು ಬಿದ್ದಿವೆ.
ಈ ಮೂರು ಎಕರೆ ಪ್ರದೇಶದಲ್ಲೂ ಇಂಥಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಕಪಕ್ಕದ ಹೊಲದಲ್ಲೂ ಕೂಡ ಇಂತಹದ್ದೇ ಪರಿಸ್ಥಿತಿ ಇದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಕೂಡ ಮೆಣಸಿನಕಾಯಿ ಬೆಳೆಗಾರ ಮಾತ್ರ ಇಂತಹ ಬೆಳೆನಷ್ಟ ಅನುಭವಿಸೋದು ಸರ್ವೇ ಸಾಮಾನ್ಯವಾಗಿದೆ.