ಬಳ್ಳಾರಿ:ಜಿಲ್ಲೆಯಲ್ಲಿ ಸುಡು ಬಿಸಿಲಿಗೆ ಜನ ತತ್ತರಿಸಿದ್ದು, ಬೇಸಿಗೆ ಬಿಸಿಲಿನ ಹೊಡೆತ ತಾಳಲಾಗದೇ ಮಕ್ಕಳು ಸೇರಿದಂತೆ ಜನರೆಲ್ಲಾ ನದಿಗಳನ್ನು ಹಾಗೂ ಕಾರಂಜಿಗಳನ್ನು ಹುಡುಕಿಕೊಂಡು ಮೈಮನ ತಂಪಾಗಿಸಿಕೊಳ್ಳುತ್ತಿದ್ದಾರೆ.
ಬಿಸಿಲ ಬೇಗೆ... ಚಿಮ್ಮುವ ಕಾರಂಜಿಗೆ ಮೈಯೊಡ್ಡಿದ ಚಿಣ್ಣರು! - HOSAPETE NEAR PAMPAVAN PARK STORY
ಬಿಸಿಲಿನ ಹೊಡೆತ ತಾಳಲಾಗದೇ ಮಕ್ಕಳು ಚಿಮ್ಮುವ ಕಾರಂಜಿಗಳ ಮೊರೆ ಹೋಗಿದ್ದು, ಚಿಮ್ಮುವ ನೀರಿಗೆ ಚಿಣ್ಣರು ಮೈಯೊಡ್ಡಿ ನೀರಿನಾಟ ಆಡುವ ದೃಶ್ಯ ಕಂಡುಬಂತು.

ಗಣಿನಾಡು ಬಳ್ಳಾರಿ ಹಾಗೂ ನೆರೆಯ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸುಡು ಬಿಸಿಲಿಗೆ ಮೈಯೆಲ್ಲಾ ಬೆವರು. ಎಲ್ಲಿ ನೀರು ಸಿಕ್ಕಿತು ಎಂಬ ಕಾತರದಲ್ಲಿ ಪ್ರತಿಯೊಬ್ಬರೂ ಹಾತೊರೆಯುತ್ತಾರೆ. ಕೆಲವರು ತುಂಗಭದ್ರಾ ನದಿಯ ನೀರಿಗೆ ಮೊರೆ ಹೋಗುತ್ತಾರೆ. ಕೆಲವರು ಕಾರಂಜಿಗೆ ಮೈಯೊಡ್ಡುವ ದೃಶ್ಯವಂತೂ ಸಾಮಾನ್ಯವಾಗಿಬಿಟ್ಟಿದೆ. ಹೊಸಪೇಟೆ ನಗರದಿಂದ ಅಣತಿ ದೂರದಲ್ಲಿರುವ ಕೊಪ್ಪಳ ಜಿಲ್ಲೆ ವ್ಯಾಪ್ತಿಗೆ ಬರುವ ಪಂಪಾ ವನದಲ್ಲಿನ ಕಾರಂಜಿಯಂತೆ ಚಿಮ್ಮುವ ನೀರಿಗೆ ಹತ್ತಾರು ಚಿಣ್ಣರು ಮೈಯೊಡ್ಡಿ ನೀರಿನಾಟ ಆಡುತ್ತಿದ್ದಾರೆ. ಒಂದೊಂದು ಹೆಜ್ಜೆಗೂ ತಮ್ಮನ್ನು ತಾವು ತೊಡಗಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಕಾರಂಜಿಯ ನಲ್ಲಿಯೊಳಗಿನ ನೀರು ಸುತ್ತಲೂ ತಿರುಗುತ್ತೆ. ಆ ಕಾರಂಜಿ ತಮ್ಮತ್ತ ಬಂದಾಗ, ಅದರಿಂದ ಚಿಮ್ಮುವ ನೀರಿಗೆ ಚಿಣ್ಣರು ಮೈಯೊಡ್ಡುತ್ತಾರೆ. ಒಂದು ಸುತ್ತು ಅದರೊಂದಿಗೆ ತಿರುಗಿ, ಕಾರಂಜಿಯಂತೆ ಚಿಮ್ಮುವ ನೀರಿನೊಂದಿಗೆ ಆನಂದವನ್ನ ಆಸ್ವಾದಿಸುತ್ತಾರೆ. ಕಾರಂಜಿ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಮೈಯೊಡ್ಡಿ, ಸುತ್ತಲೂ ತಿರುಗಿ ಮೈಯನ್ನು ಒದ್ದೆಯಾಗಿಸಿಕೊಳ್ಳುತ್ತಾರೆ. ಈ ಮೂಲಕ ಮಕ್ಕಳು ತನುಮನವನ್ನ ತಂಪಾಗಿಸಿಕೊಳ್ಳುತ್ತಾರೆ.