ಬಳ್ಳಾರಿ:ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಬಾಲ್ಯ ವಿವಾಹ ನಿಷೇಧ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ಕುರಿತು ಜನಜಾಗೃತಿ ಜಾಥಾ ನಡೆಸಲಾಯಿತು.
ಜನಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಬಾಲ್ಯ ವಿವಾಹಗಳಿಗೆ ಪ್ರಚೋದಿಸಿದವರ ಹಾಗೂ ವಿವಾಹದ ಸಂದರ್ಭದಲ್ಲಿ ಪಾಲ್ಗೊಂಡವರ ವಿರುದ್ದ ದೂರು ದಾಖಲಿಸಿ ಕ್ರಮಕೈಗೊಳ್ಳುವುದಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.
ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಲಾಕ್‍ಡೌನ್ ಸಂದರ್ಭದ ಏಪ್ರಿಲ್ ಮಾಹೆಯಿಂದ ಇಲ್ಲಿಯವರೆಗೆ 150 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. 13 ಬಾಲ್ಯ ವಿವಾಹದ ದೂರುಗಳು ದಾಖಲಾಗಿವೆ. 30 ಪೋಕ್ಸ್ ಪ್ರಕರಣಗಳು, 05 ಮಹಿಳಾ ದೌರ್ಜನ್ಯಕ್ಕೆ ಒಳಗಾದ ಪ್ರಕರಣಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಇವುಗಳ ವಿರುದ್ದ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹಳ್ಳಿಗಳಲ್ಲಿ ನಡೆಯುವ ಬಾಲ್ಯ ವಿವಾಹಗಳನ್ನು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜೊತೆಗೂಡಿ ತಡೆಗಟ್ಟುವ ಪ್ರಯತ್ನ ಮಾಡಬೇಕು. ನಿಮ್ಮ ಕರ್ತವ್ಯಕ್ಕೆ ಯಾವುದೇ ತೊಂದರೆ ಹಾಗೂ ಬೆದರಿಕೆಗಳು ಬಂದರೆ ಅವುಗಳಿಗೆ ಅಂಜದೇ ತಮ್ಮ ಗಮನಕ್ಕೆ ತನ್ನಿ ಮತ್ತು ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಹಾಗೂ ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.
18 ವರ್ಷದ ಹೆಣ್ಣು ಮಗು ಹಾಗೂ 21 ವರ್ಷದ ಒಳಗಿನ ಗಂಡಿನ ನಡುವೆ ನಡೆಯುವ ಮದುವೆ ಅಥವಾ ದಂಪತಿಗಳಲ್ಲಿ ಯಾರಾದರೊಬ್ಬರು ನಿಗದಿತ ವಯಸ್ಸಿನ ಒಳಗಿನವರಾಗಿದ್ದರೇ ಅಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಿ ವಿವಾಹಕ್ಕೆ ಭಾಗವಹಿಸಿದ ಎಲ್ಲರ ಮೇಲೆ ದೂರು ದಾಖಲಿಸಿ ಮಕ್ಕಳನ್ನು ಬಾಲ್ಯವಿವಾಹದಿಂದ ತಡೆಗಟ್ಟುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರ್ಜುನ್ ಮಲ್ಲೂರ್ ಅವರು ಹೇಳಿದರು.
ಜಾಗೃತಿ ಜಾಥಾ ವಾಹನವು ಜಿಲ್ಲೆಯ 11 ತಾಲೂಕುಗಳಲ್ಲಿ 16 ದಿನಗಳ ಕಾಲ ಮೊಬೈಲ್ ಧ್ವನಿ ವರ್ಧಕ, ಭಿತ್ತಿಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ, ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಎಚ್.ಸಿ.ರಾಘವೇಂದ್ರ, ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸೈಯದ್ ಚಾಂದ್‍ಪಾಷಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ವಿಜಯಲಕ್ಷ್ಮಿ ಮೈದೂರು ಹಾಗೂ ಇಲಾಖೆ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.