ಹೊಸಪೇಟೆ:ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗುತ್ತಾರೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಬಾಲ ಚೈತನ್ಯ ಯೋಜನೆಯಡಿ ಅಪೌಷ್ಠಿಕ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿತ್ತು.
ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಿರೇಹಡಗಲಿ, ಹರಪನಹಳ್ಳಿ ಆರೈಕೆ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಕೇಂದ್ರಗಳಲ್ಲಿ 197 ಮಕ್ಕಳು ದಾಖಲಾಗಿದ್ದರು. ಈ 14 ದಿನಗಳಲ್ಲಿ ಅಪೌಷ್ಟಿಕ ಮಕ್ಕಳಲ್ಲಿ ಸಾಕಷ್ಟು ಆರೋಗ್ಯ ಸುಧಾರಿಸಿರುವುದು ಕಂಡು ಬಂದಿದೆ.
ಕೇಂದ್ರದಲ್ಲಿನ ಚಟುವಟಿಕೆಗಳು:
ಮಕ್ಕಳೊಂದಿಗೆ ಪಾಲಕರು ಕೇಂದ್ರದಲ್ಲಿ 14 ದಿನಗಳು ಕಲಿಯಬೇಕಾಗಿತ್ತು. ಬೆಳಿಗ್ಗೆ 6.30 ಯೋಗದ ದಿನಚರಿ ಪ್ರಾರಂಭವಾಗುತ್ತಿತ್ತು. ಬಳಿಕ ಮಕ್ಕಳಿಗೆ ಹಾಲುಣಿಸುವುದು, ಅಲ್ಪಾಹಾರ, ಪೌಷ್ಟಿಕ ಆಹಾರ ಸೇವಿಸುವುದು, ಶಾಲಾ ಶಿಕ್ಷಣ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಮಕ್ಕಳಿಗೆ ಮೆಡಿಕಲ್ ಟೆಸ್ಟ್, ಕ್ರೀಡೆ ಚಟುವಟಿಕೆಗಳು ಕೇಂದ್ರದಲ್ಲಿ ನಡೆಯುತ್ತಿದ್ದವು. ಮಕ್ಕಳಿಗೆ ಪೌಷ್ಟಿಕ ಆಹಾರಗಳಾದ ಕಿಚಡಿ, ದಾವಣಗೆರೆ ಉಂಡೆ, ಹಾಲು, ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತಿತ್ತು.
ಮಕ್ಕಳ ತಜ್ಞರ ಸಲಹೆ:
ಅಪೌಷ್ಟಿಕತೆ ಜೊತೆಗೆ ತಾಯಂದಿರಿಗೆ ಮಕ್ಕಳು ಅಮೂಲ್ಯ ಸಲಹೆಗಳನ್ನು ನೀಡುತ್ತಿದ್ದರು. ಕೆಲಸಕ್ಕೆ ಜೀವನವನ್ನು ಸೀಮಿತಗೊಳಿಸಬಾರದು. ಇದರ ಜತೆಯಲ್ಲಿ ಮಕ್ಕಳ ಆರೈಕೆಯಲ್ಲಿ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಮಕ್ಕಳ ತಜ್ಞರಾದ ಅಶೋಕ ದತಾರ್ ಹಾಗೂ ರಾಜೀವ್ ಅವರು ಕೇಂದ್ರದಲ್ಲಿ ಪ್ರತಿದಿನ ಪಾಲಕರಿಗೆ ಸಲಹೆಯನ್ನು ನೀಡುತ್ತಿದ್ದರು. ಪೌಷ್ಟಿಕ ಆಹಾರದ ಜತೆಗೆ ಪಾಲಕರಲ್ಲಿ ಕಲಿಕೆಗೆ ಉತ್ತೇಜನವನ್ನು ನೀಡಲಾಗುತ್ತಿತ್ತು.
ನರೇಗಾದಡಿಯಲ್ಲಿ ಸಹಾಯ:
14 ದಿನಗಳ ಕಾಲ ಆರೈಕೆ ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ತಾಯಂದಿರಿಗೆ ಅಮೂಲ್ಯ ಸಲಹೆಗಳನ್ನು ನೀಡಲಾಗುತ್ತದೆ. ಬಳಿಕ 14 ದಿನಗಳ ಕಾಲ ನರೇಗಾದಡಿಯಲ್ಲಿ ತಾಯಿಗೆ 270 ದಿನಗೂಲಿಯನ್ನು ಮಕ್ಕಳ ಪೋಷಣೆಗೆ ನೀಡಲಾಗುತ್ತದೆ. ಇದು ಮಕ್ಕಳಿಗೆ ಆರೋಗ್ಯ ಚೇತರಿಕೆಯಲ್ಲಿ ಅನುಕೂಲವಾಗುತ್ತದೆ.
ಪೋಷಕರ ಮೆಚ್ಚುಗೆ:
ಆರೈಕೆ ಕೇಂದ್ರದಲ್ಲಿ ಮಕ್ಕಳು 14 ದಿನಗಳ ಕಾಲ ಇದ್ದಿದ್ದರಿಂದ ತೂಕದಲ್ಲಿ ಹೆಚ್ಚಳವಾಗಿದೆ. ಒಂದು ಮಗು 1 ಕೆಜಿಯಿಂದ ಎರಡು ಕೆಜಿ ತೂಕ ಹೆಚ್ಚಳವಾಗಿದೆ. ಇದಕ್ಕೆ ಪಾಲಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆರೈಕೆ ಕೇಂದ್ರ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.
ಈಟಿವಿ ಭಾರತ್ನೊಂದಿಗೆ ದೂರವಾಣಿ ಮೂಲಕ ಬಳ್ಳಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜ ಅವರು ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ 197 ಆರೈಕೆ ಕೇಂದ್ರದಲ್ಲಿ ಮಕ್ಕಳು ದಾಖಲಾಗಿದ್ದರು. ಈ ಕಾರ್ಯಕ್ರಮದ ಮೂಲಕ ಶೇ.80 ಫಲಿತಾಂಶ ಬಂದಿದೆ. ಮಕ್ಕಳು ರೆಡ್ ಝೋನ್ನಿಂದ ಯೆಲ್ಲೋಗೆ ಬಂದಿದ್ದಾರೆ. ಇನ್ನುಳಿದವರು ಶೇ.50 ಚೇತರಿಸಿಕೊಂಡಿದ್ದಾರೆ. ಎರಡು ದಿನಗಳಲ್ಲಿ ಎರಡನೇ ಬ್ಯಾಚ್ ಪ್ರಾರಂಭ ಮಾಕೊಡಲಾಗುವುದು. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿಯ ಪಟ್ಟಣಗಳಲ್ಲಿ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಬ್ಯಾಚ್ ನಲ್ಲಿ 207 ಮಕ್ಕಳಿಗೆ ಆರೈಕೆ ಕೇಂದ್ರದ ಅಪೌಷ್ಟಿಕತೆಯನ್ನು ಹೋಗಲಾಡಿಸಲಾಗುವುದು. ಅಲ್ಲದೇ, ಮ್ಯಾಮ್ನಲ್ಲಿರುವ ಮಕ್ಕಳಿಗೆ ಮನೆಯಲ್ಲಿ ಆರೈಕೆ ಹೇಗೆ ಮಾಡಬೇಕು ಎಂದು ಪಾಲಕರಿಗೆ ತಿಳಿಸಿ ಕೊಡಲಾಗುವುದು ಎಂದು ತಿಳಿಸಿದರು.