ಬಳ್ಳಾರಿ : ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ (ಮೇ 29) ಭೀಕರ ರಸ್ತೆ ಅಪಘಾತದಲ್ಲಿ ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದ 11 ಮೃತಪಟ್ಟಿದ್ದರು. ಇದೀಗ ಮೃತರ ಕುಟುಂಬಸ್ಥರಿಗೆ ಭಾನುವಾರ ಸಂಜೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಗಳ ಚೆಕ್ ವಿತರಿಸಲಾಯಿತು.
ಚೆಕ್ ವಿತರಿಸಿದ ಬಳಿಕ ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ನಾಗೇಂದ್ರ, ಸಿಎಂ ಸಿದ್ದರಾಮಯ್ಯ ಅವರು ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಚೆಕ್ ನೀಡುವಂತೆ ಘೋಷಣೆ ಮಾಡಿದ್ದರು. ಜೊತೆಗೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳುವಂತೆ ಸಿಎಂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಂಗನಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ರಸ್ತೆ ಅಪಘಾತದಲ್ಲಿ ಒಟ್ಟು ಈವರೆಗೆ 11 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಸಂಗನಕಲ್ಲು ಗ್ರಾಮದ 10 ಜನರು ಮೃತರಾಗಿದ್ದರು. ಮೃತರ ಕುಟುಂಬದವರಲ್ಲಿ ಸದ್ಯ 7 ಜನರಿಗೆ ಮಾತ್ರ ಸಿಎಂ ಪರಿಹಾರ ನಿಧಿಯ ಚೆಕ್ ವಿತರಣೆ ಮಾಡಲಾಗಿದೆ. ಇನ್ನುಳಿದ ಮೂರು ಜನರ ಕುಟುಂಬಕ್ಕೆ ಶೀಘ್ರವೇ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಕುರುಬೂರು ರಸ್ತೆ ಅಪಘಾತ: ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮಕ್ಕೆ ಮೃತದೇಹಗಳ ರವಾನೆ