ಕರ್ನಾಟಕ

karnataka

'ಆದರ್ಶ ಗ್ರಾಮ'ಕ್ಕೆ ಕಾಳಜಿ ತೋರದ ಕೇಂದ್ರ ಸರ್ಕಾರ

By

Published : Mar 29, 2019, 11:33 PM IST

ಸಂಸದರ ಆದರ್ಶ ಗ್ರಾಮದ ಆಯ್ಕೆಗೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲದೇ, ತರಾತುರಿಯಲ್ಲಿ ಆಯ್ಕೆ ಮಾಡಿಕೊಂಡ 'ಸಂಸದರ ಆದರ್ಶ ಗ್ರಾಮ' ಯಾವುದೇ ಅಭಿವೃದ್ಧಿ ಕಂಡಿಲ್ಲ.

ಸಂಸದರ ಆದರ್ಶ ಗ್ರಾಮ ತಂಬ್ರಹಳ್ಳಿ

ಬಳ್ಳಾರಿ:ಹೆಸರಿಗೆ ಮಾತ್ರ ಸಂಸದರ ಆದರ್ಶ ಗ್ರಾಮ, ಆದರೆ ಕೇಂದ್ರ ಸರ್ಕಾರದ ಯಾವೊಂದು ಯೋಜನೆ ಈ ಗ್ರಾಮಕ್ಕೆ ಸಂದಿಲ್ಲ, ಅಭಿವೃದ್ಧಿ ಕಾಣಕೆ, ಜನರು ಪರಿತಪ್ಪಿಸುವಂತಾಗಿದೆ.

2014ರಲ್ಲಿ ಅಂದಿನ ಸಂಸದರಾಗಿದ್ದ ಬಿ. ಶ್ರೀರಾಮುಲು ಅವರು ತಂಬ್ರಹಳ್ಳಿ ಗ್ರಾಮವನ್ನ ಸಂಸದರ ಆದರ್ಶ ಗ್ರಾಮವೆಂದು ಆಯ್ಕೆ‌ ಮಾಡಿಕೊಂಡಿದ್ದರು. ಹೋಬಳಿ ಕೇಂದ್ರವಾಗಿದ್ದ ಈ ಗ್ರಾಮದಲ್ಲಿ ಸುಸಜ್ಜಿತವಾದ ಬ್ಯಾಂಕ್, ಪೊಲೀಸ್‌ ಠಾಣೆ, ಅಂಚೆ ಕಚೇರಿ ಹಾಗೂ ಜೆಸ್ಕಾಂ ಕಚೇರಿ, ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಇತರೆ ಸೌಲಭ್ಯವನ್ನ ಗ್ರಾಮ ಹೊಂದಿತ್ತು.

ಸಂಸದರ ಆದರ್ಶ ಗ್ರಾಮ ತಂಬ್ರಹಳ್ಳಿ

ಸಂಸದರ ಆದರ್ಶ ಗ್ರಾಮದ ಆಯ್ಕೆಗೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲದೇ, ತರಾತುರಿಯಲ್ಲಿ ಆಯ್ಕೆ ಮಾಡಿ ಕೊಂಡಿದ್ದು, ಅಂದಾಜು 63 ಕೋಟಿ ರೂ.ಗಳ ಕ್ರಿಯಾಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲಾಗಿತ್ತು. ಅದೀಗ ಕೇವಲ 22 ಕೋಟಿ ರೂ.ಗಳ ಅನುದಾನಕ್ಕೆ ಅನುಗುಣವಾಗಿ ಆ ಕ್ರಿಯಾ ಯೋಜನೆಯನ್ನ ಬದಲಿಸಲಾಗಿದೆ. ವಾಸ್ತವಾಗಿ ಈ ಗ್ರಾಮವನ್ನೇ ಸಂಸದರ ಆದರ್ಶ ಗ್ರಾಮವೆಂದು ಆಯ್ಕೆಗೊಂಡಾಗ ಶ್ರೀರಾಮುಲು ಅವರ ವಿರುದ್ಧವೇ ಸ್ವಪಕ್ಷದ ಕಾರ್ಯಕರ್ತರೇ ತಿರುಗಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

ಪಕ್ಕದ ಗ್ರಾಮಗಳಲ್ಲಿ ಕಡು ಬಡತ‌ನವಿದೆ. ಅಂತಹ ಗ್ರಾಮವನ್ನ ಸಂಸದರು ಗುರುತಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಾರಂಭದಲ್ಲಿ ಜಿಲ್ಲಾಧಿಕಾರಿ, ಸಿಇಒ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದರೂ ಯಾವುದೇ ಸಾರ್ಥಕವಿಲ್ಲದಂತಾಗಿದೆ. ಸಂಸದರು ತಮ್ಮ ಅನುದಾನದಡಿ ಗ್ರಾಮದ ಮೂರು ಕಡೆ ಹೈಮಾಸ್ ದೀಪಗಳನ್ನು 19 ಲಕ್ಷರೂ ಅನುದಾನದಲ್ಲಿ ಅಳವಡಿಸಿದ್ದನ್ನು ಬಿಟ್ಟರೆ ಯಾವುದೇ ಬೃಹತ್ ಮೊತ್ತದ ಅನುದಾನ ಒದಗಿಲ್ಲ.

22 ಕೋಟಿ ಕ್ರಿಯಾಯೋಜನೆ

ತಂಬ್ರಹಳ್ಳಿಯನ್ನು ಆದರ್ಶ ಗ್ರಾಮವನ್ನಾಗಿಸಲು 2014 ಸೆ. ರಂದು ಆಯ್ಕೆ ಮಾಡಿಕೊಳ್ಳಲಾಯಿತು. 2015 ಮಾರ್ಚ್‍ನಲ್ಲಿ 22.94 ಕೋಟಿರೂಗೆ ಕ್ರಿಯಾಯೋಜನೆ ಸಿದ್ದಪಡಿಸಲಾಯಿತು. ಗ್ರಾಮದ ಅಭಿವೃಧ್ದಿಗೆ ಕೇಂದ್ರದ ಯಾವುದೇ ಅನುದಾನ ಘೋಷಣೆಯಾಗದಿದ್ದರಿಂದ, ಆದರ್ಶ ಗ್ರಾಮ ಯೋಜನೆಯ ಕ್ರಿಯಾಯೋಜನೆ, ಸಮೀಕ್ಷೆ, ಗ್ರಾಮಸಭೆ, ಬೇಸ್‍ಲೈನ್ ಸರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಟೀ, ಊಟದ ಖರ್ಚನ್ನು ಗ್ರಾ.ಪಂ. ಯಿಂದ 80 ಸಾವಿರ ರೂಗಳನ್ನು ಬಳಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ಗ್ರಾಮದ ಕನಸು ಸಂಪೂರ್ಣ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತು ಆಗಿದೆ.

ಜೆಸ್ಕಾಂ ಕ್ರಿಯಾಯೋಜನೆ ವ್ಯರ್ಥ

ಗ್ರಾಮದ ಐದು ಕಡೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿದ್ದರೂ ಅದು ಅರ್ಧಬಂರ್ದಕ್ಕೆ ಪೂರ್ಣಗೊಂಡಿದೆ. ಕೆಲ ಪರಿವರ್ತಕಗಳ ಬಳಿ ಕೇಬಲ್ ಅಳವಡಿಕೆ ಮಾಡದೇ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಜೆಸ್ಕಾಂ ಇಲಾಖೆ ಆದರ್ಶ ಗ್ರಾಮ ಯೋಜನೆಗೆ 26 ಲಕ್ಷರೂ ಕ್ರಿಯಾಯೋಜನೆ ಸಿದ್ದಪಡಿಸಿ ಸಂಪೂರ್ಣ ವಿಫಲವಾಗಿದೆ. ಈವರೆಗೂ ಗ್ರಾಮದಲ್ಲಿ ದುರಸ್ಥಿ ಕಂಬಗಳನ್ನು ಅಳವಡಿಕೆಯಾಗಿಲ್ಲ. 40 ಮಧ್ಯಂತರ ಕಂಬಗಳು ಮಂಜೂರಾಗಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಬಿಪಿಎಲ್ ಕಾರ್ಡ್‍ನ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಬಲ್ಬ್ ನೀಡುವ ಯೋಜನೆ ಕೇವಲ ಕೆಲವರಿಗೆ ಮಾತ್ರ ತಲುಪಿದ್ದು, ಬಹುತೇಕರು ಯೋಜನೆಯಿಂದ ವಂಚಿತರಾಗಿದ್ದಾರೆ.

ಪ್ರವಾಸೋದ್ಯಮ

5.80 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಪ್ರವಾಸೋಧ್ಯಮಕ್ಕೆ ಸಿದ್ದಪಡಿಸಿದರೂ ಸಾರ್ಥಕವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಬಂಡೇ ರಂಗನಾಥ ದೇಗುಲವನ್ನ ಪ್ರವಾಸಿ ತಾಣವನ್ನಾಗಿಸುವ ಭರವಸೆ ಕೇವಲ ಕ್ರಿಯಾಯೋಜನೆ ಯಲ್ಲಿದೆ. ಹಿನ್ನೀರು ಪ್ರದೇಶದಲ್ಲಿ ಬೋಟಿಂಗ್, ಬಂಡೇ ರಂಗನಾಥನ ಇತಿಹಾಸದ ಬಗ್ಗೆ ಕಿರುಚಿತ್ರ ನಿರ್ಮಾಣ, ದೇಗುಲದ ಬಳಿ ಯಾತ್ರಿ ನಿವಾಸ ನಿರ್ಮಾಣ, ವೀವ್ ಪಾಯಿಂಟ್, ಓಬಳನಾಯಕನ ಬಾವಿ ಅಭಿವೃಧ್ದಿ ಕೇವಲ ಅಂದಿನ ಕ್ರಿಯಾಯೋಜನೆ ಕಡತದಲ್ಲೇ ಅಚ್ಚಳಿಯದೆ ಉಳಿದಿವೆ.

ಕುಡಿಯುವ ನೀರು

ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಸೌಲಭ್ಯ ಕಲ್ಪಿಸುವುದಕ್ಕಾಗಿ 70 ಲಕ್ಷಕ್ಕೂ ಹೆಚ್ಚು ಕ್ರಿಯಾಯೋಜನೆ ತಯಾರಿಸಲಾಗಿತ್ತು. ಪ್ರಮುಖವಾಗಿ ಇದರಲ್ಲಿ 700 ಬಿಪಿಎಲ್ ಕಾರ್ಡ್ ಫಲಾನುಭವಿ ಕುಟುಂಬಗಳಿಗೆ ವೈಯಕ್ತಿಕ ನಳ ಸಂಪರ್ಕ ಕಲ್ಪಿಸುವುದು . ರೈಸಿಂಗ್ ಪೈಪ್‍ಲೈನ್ ಅಳವಡಿಕೆ, ಮೋಟಾರು ಅಳವಡಿಸಿವುದು, ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ವಿತರಣೆ, ಗ್ರಾಮದ ಕುಡಿಯುವ ನೀರಿನ ಸ್ಥಾವರಗಳಿಗೆ ನೀರು ಸಂಗ್ರಹಣೆ ಮಾಡುವುದು, ಶುದ್ದ ಕುಡಿಯುವ ನೀರಿನ ಘಟಕ, ಬೋರ್‍ವೆಲ್ ರಿಚಾರ್ಜ್ ಫಿಟ್ ಅಳವಡಿಸುವ ಯೋಜನೆಗಳು ಇಂದಿಗೂ ನೆನೆಗುದಿಗೆ ಬಿದ್ದಿವೆ. ರಾಜ್ಯ ಸರಕಾರದ ಅನುದಾನದಲ್ಲಿಯೇ ಸಾಕಷ್ಟು ಅಭಿವೃಧ್ದಿ ಕಾಮಗಾರಿಗಳನ್ನು ಮಾಡಿದ್ದನ್ನು ಬಿಟ್ಟರೆ, ಆದರ್ಶ ಗ್ರಾಮದ ಕೇಂದ್ರ ಸರಕಾರದ ಯಾವುದೇ ಅನುದಾನ ಈವರೆಗೂ ಒದಗಿಲ್ಲ.

ಶಿಕ್ಷಣ

ತಂಬ್ರಹಳ್ಳಿ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃಧ್ದಿಗಾಗಿ ಸ್ಮಾಟ್‍ಕ್ಲಾಸ್ ನಿರ್ಮಾಣ ಯೋಜನೆ ಈವರೆಗೂ ಕೈಗೂಡಿಲ್ಲ. ಭಾರೀ ಮಕ್ಕಳ ಸಂಖ್ಯೆಯನ್ನು ಹೊಂದಿರುವ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳ ವಿಧ್ಯಾಭ್ಯಾಸಕ್ಕೆ ಪೂರಕವಾಗಿ ಎಲ್‍ಸಿಡಿ ಪ್ರಾಜೆಕ್ಟರ್, 3 ಕೊಠಡಿಗಳಿಗೆ ವಿದ್ಯುತ್, ಶಾಲೆಯ ಗ್ರಂಥಾಲಯಕ್ಕೆ 25 ಆಸನಗಳು, 300 ಪುಸ್ತಕಗಳು, ರ್ಯಾಕ್, ಟೇಬಲ್‍ಗಳನ್ನು ಒದಗಿಸಬೇಕು ಎಂಬುದು ಕ್ರೀಯಾಯೋಜನೆಗೆ ಸೀಮಿತವಾಗಿದೆ.

ABOUT THE AUTHOR

...view details