ಬಳ್ಳಾರಿ: ಕೊರಚ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪದಡಿ ಜಿಲ್ಲೆಯ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಹರಪನಹಳ್ಳಿ ತಾಲೂಕಿನ ಅಗ್ರಹಾರ ಗ್ರಾಮದ ಕೊರಚ ಸಮುದಾಯದ ಮುಖಂಡರು ಹಿರೇಹಡಗಲಿ ಪೊಲೀಸ್ ಠಾಣೆಗೆ ತೆರಳಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ.
ಘಟನೆಯ ವಿವರ:
ಜಿಲ್ಲೆಯ ಕುರುವತ್ತಿ ಗ್ರಾಮದ ಬಳಿಯ ಗುತ್ತೆಮ್ಮನ ಅರಣ್ಯ ಪ್ರದೇಶದಲ್ಲಿ ಕುರಿಗಳ ಅಡ್ಡೆಗೆ ನುಗ್ಗಿದ ಕುರಿಗಳ್ಳರನ್ನ ಹಿಡಿದು ಕುರಿಗಾಹಿಗಳು ಹಿಗ್ಗಾ ಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸದೇ ತಮ್ಮ ಬಳಿಯೇ ಆ ಕಳ್ಳರನ್ನ ಬಂಧಿಸಿಟ್ಟಿದ್ದರು. ಅವರನ್ನ ಪೊಲೀಸರಿಗೆ ಒಪ್ಪಿಸುವಂತೆ ಕೋರಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಕಾಗಿನೆಲೆ ಗುರುಪೀಠದ ಸ್ವಾಮೀಜಿ ರಾಜಿ ಪಂಚಾಯಿತಿ ಮಾಡಲು ಹೋಗಿದ್ದರು. ಆದ್ರೆ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು, ತಮ್ಮ ಮಾತಿನ ಭರಾಟೆಯಲ್ಲಿ ಕೊರಚ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಶಾಸಕ ಪಿಟಿಪಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ.