ಬಳ್ಳಾರಿ: ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಂಗಳೂರು ಘಟನೆ ಬಗ್ಗೆ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದರು.ಕುಮಾರಸ್ವಾಮಿ ಅವರು 2 ಅವಧಿಗೆ ಸಿಎಂ ಆಗಿದ್ದವರು. ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ನನಗಂತೂ ಗೊತ್ತಿಲ್ಲ ಎಂದರು.
ಯಾವುದೋ ನಕಲಿ ವಿಡಿಯೋ ತುಣುಕು ಹಿಡಿದುಕೊಂಡು ಪೊಲೀಸರ ವಿರುದ್ಧ ಇಂತಹ ನಿರ್ಣಯಕ್ಕೆ ಬರೋದು ಸರಿಯಲ್ಲ. ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಅವರು ಮಾಡಬಾರದು ಎಂದರು.
ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿ ಟಿ ರವಿ ಚಾಲನೆ.. ರಾಶಿ ರಾಶಿ ಕಲ್ಲು ತಂದು ಎಸೆದವರು, ಬೀದಿಗಿಳಿಯುವಂತೆ ಪ್ರಚೋದನೆ ಮಾಡಿದವರು ಪೊಲೀಸರಾ? ಈ ಬಗ್ಗೆ ಕುಮಾರಸ್ವಾಮಿ ಮಾತಾಡಿದರೆ ಜೆಡಿಎಸ್ ಪಕ್ಷವನ್ನು ಸೆಕ್ಯುಲರ್ ಅನ್ನಬಹುದು. ಇಲ್ಲದೇ ಹೋದರೆ ಫಾದರ್ ಅಂಡ್ ಸನ್ ಪಾರ್ಟಿಯಾಗಲಿದೆ ಎಂದರು. ಕಲ್ಲು ಹೊಡೆದವರು ಪೊಲೀಸರು ಅಂದರೆ ಜನ ಏನಂದುಕೊಳ್ಳುತ್ತಾರೆ ಅಂತಾ ಪ್ರಶ್ನಿಸಿದರು.
ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನಕ್ಕೆ ಅನುದಾನ ತಡೆ ಹಿಡಿದಿರೋದನ್ನ ಸಮರ್ಥಿಸಿಕೊಂಡರು.ಸಾಮರಸ್ಯ ವಾತಾವರಣದಲ್ಲಿ ಸಮ್ಮೇಳನ ಜರುಗಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದು. ಅತಿರೇಕದ ವರ್ತನೆಗೆ ಅವಕಾಶ ಕೊಡಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದರು.