ಕರ್ನಾಟಕ

karnataka

ETV Bharat / state

ವಿಜಯನಗರ: ದೇವರ ಬನ್ನಿ ಉತ್ಸವ ಸಂಭ್ರಮ, 20ಕ್ಕೂ ಹೆಚ್ಚು ಶಕ್ತಿ ದೇವತೆಗಳ ಆರಾಧನೆ - dasara

ಹೊಸಪೇಟೆಯ ಧರ್ಮದಗುಡ್ಡದಲ್ಲಿ ದೇವರ ಬನ್ನಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಬನ್ನಿ ಉತ್ಸವ
ಬನ್ನಿ ಉತ್ಸವ

By ETV Bharat Karnataka Team

Published : Oct 24, 2023, 3:18 PM IST

Updated : Oct 24, 2023, 3:32 PM IST

ದೇವರ ಬನ್ನಿ ಉತ್ಸವ

ವಿಜಯನಗರ:ಹೊಸಪೇಟೆ ತಾಲೂಕಿನ ನಾಗೇನಹಳ್ಳಿಯ ಬಸವನದುರ್ಗದ ಐತಿಹಾಸಿಕ ಧರ್ಮದಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ ದೇವರ ಬನ್ನಿ ಉತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು. ನಾಡಿನೆಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸೋಮವಾರ ಸಂಜೆ ಶಕ್ತಿ ದೇವತೆಗಳ ಸಮ್ಮಿಲನ ಕಣ್ತುಂಬಿಕೊಂಡರು.

ವಿಜಯದಶಮಿಗೂ ಮುನ್ನಾ ದಿನ ನವಮಿಯಂದು ಧರ್ಮದಗುಡ್ಡದಲ್ಲಿನ ಶ್ರೀ ಚನ್ನಬಸವೇಶ್ವರಸ್ವಾಮಿ ಮತ್ತು ಶ್ರೀ ನಿಜಲಿಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬಸವನದುರ್ಗ ಗ್ರಾಮದಿಂದ ಆಗಮಿಸಿದ ಶ್ರೀ ಚನ್ನಬಸವೇಶ್ವರ ಸ್ವಾಮಿ ಉತ್ಸವಮೂರ್ತಿಯ ಪಲ್ಲಕ್ಕಿಯ ಜತೆಗೆ ತಾಲೂಕಿನ ನಾನಾ ಕಡೆಯಿಂದ 20ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಯನ್ನು ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದು, ಗುಡ್ಡದ ಕೆಳಗಿನ ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕಿದರು. ಮೂಲಸ್ಥಳಕ್ಕೆ ತೆರಳುವ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಭಕ್ತರು ನಮಿಸಿದರು.

ಬಸವನದುರ್ಗದ ಗುಡ್ಡದ ಚನ್ನಬಸವೇಶ್ವರ, ಬಾಣದಕೇರಿ ನಿಜಲಿಂಗಮ್ಮ, ತಳವಾರಕೇರಿ ರಾಂಪುರ ದುರ್ಗಮ್ಮ, ಮ್ಯಾಸಕೇರಿ ಹುಲಿಗೆಮ್ಮ, ಕಮಲಾಪುರ ಗೋನಾಳ್‌ಕೇರಿ ನಿಜಲಿಂಗಮ್ಮ, ನಾಗೇನಹಳ್ಳಿ ಹುಲಿಗೆಮ್ಮ, ನಾಗೇನಹಳ್ಳಿ ಹರಿಜನಕೇರಿ ಹುಲಿಗೆಮ್ಮ, ನರಸಾಪುರ ಮಾಗಣಿಯ ಹಾಲಮ್ಮ, ಕೊಂಡನಾಯಕನಹಳ್ಳಿ ದುರ್ಗಮ್ಮ, ಮಲಪನಗುಡಿ ತಾಯಮ್ಮ, ಉಕ್ಕಡಕೇರಿ ಹುಲಿಗೆಮ್ಮ, ಹರಿಜನಕೇರಿ ಮಾಯಮ್ಮ, ರಾಂಪುರ ದುರುಗಮ್ಮ, ಜಂಬುನಾಥರಸ್ತೆ ಹರಿಜನಕೇರಿ ಹುಲಿಗೆಮ್ಮ, ಅನಂತಶಯನಗುಡಿ ಹರಿಜನಕೇರಿ ದುರ್ಗಮ್ಮ, ಚೆಲುವಾದಿಕೇರಿ ಯಲ್ಲಮ್ಮ, 5ನೇ ವಾರ್ಡ್ ಕೆಂಚಮ್ಮ, ಚಿತ್ತವಾಡ್ಗಿ ವರಕೇರಿ ನಿಜಲಿಂಗಮ್ಮ, ಮನ್ಮಥಕೇರಿ ಕಮಲಾಪುರದ ನೆರಗಲ್ಲಮ್ಮ ದೇವಿ, ಕಮಲಾಪುರ ಬಂಡಿಕೇರಿ ಹುಲಿಗೆಮ್ಮ ದೇವಿ, ಕಮಲಾಪುರ ತಿಮ್ಮನಾಥಕೇರಿ ತಾಯಮ್ಮ ದೇವಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿದ ಭಕ್ತರು ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಮೂಲಸ್ಥಳಕ್ಕೆ ಮರಳಿದರು.

ಇತಿಹಾಸ:ನಾಗೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಐತಿಹಾಸಿಕ ಪ್ರಕೃತಿದತ್ತ ಧರ್ಮದಗುಡ್ಡದ ಬಂಡೆಯ ಆಸರೆಯಲ್ಲಿ ನೆಲೆಸಿರುವ ಶ್ರೀ ಚನ್ನಬಸವೇಶ್ವರ ಸ್ವಾಮಿ ಮತ್ತು ನಿಜಲಿಂಗಮ್ಮ ದೇವಿಯು ಲಕ್ಷಾಂತರ ಭಕ್ತರ ಆರಾಧ್ಯದೈವ. ಆಯುಧಪೂಜೆಯಂದು ನಡೆಯುವ ದೇವರ ಬನ್ನಿ ಉತ್ಸವ ಇಲ್ಲಿ ಜಾತ್ರೆಯಂತೆ ನಡೆಯುವುದು ವಿಶೇಷ. ಧರ್ಮದಗುಡ್ಡದಲ್ಲಿ ಪಾಂಡವರು ನೆಲೆಸಿದ್ದರು. ಶಿವನು ತಪಸ್ಸಿಗೆ ಹೋದಾಗ ನಂದಿ ಧರ್ಮದಗುಡ್ಡಕ್ಕೆ ಬಂದಿದ್ದನು ಎಂಬುದನ್ನು ಇಲ್ಲಿನ ಶಾಸನಗಳು ಹೇಳುತ್ತವೆ ಎಂದು ಇತಿಹಾಸಕಾರರು ತಿಳಿಸುತ್ತಾರೆ. ನಾಗೇನಹಳ್ಳಿ ಗ್ರಾಮವನ್ನು ವಿಜಯನಗರ ಅರಸರ ಕಾಲದಲ್ಲಿ ನಾಗಲಾದೇವಿಪುರ ಎಂದು ಕರೆಯಲಾಗುತ್ತಿತ್ತು. ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ತಾಯಿ ನಾಗಲಾದೇವಿಯ ಹೆಸರಿನಲ್ಲಿ ಈ ಗ್ರಾಮ ನಿರ್ಮಾಣವಾಗಿದೆ. ನಾಗೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲೇ ಆಚರಣೆ ನಡೆಯುತ್ತಿರುವುದು ಈ ಭಾಗದ ಜನರ ಸುದೈವ ಎಂದೇ ಭಾವಿಸಲಾಗುತ್ತಿದೆ.

ಇದನ್ನೂ ಓದಿ:ಅರಮನೆಯಲ್ಲಿ ರಾಜ ವಂಶಸ್ಥರಿಂದ ಸಾಂಪ್ರದಾಯಿಕ ವಿಜಯ ದಶಮಿ ಪೂಜೆ: ವಿಡಿಯೋ

Last Updated : Oct 24, 2023, 3:32 PM IST

ABOUT THE AUTHOR

...view details