ಕರ್ನಾಟಕ

karnataka

ETV Bharat / state

ಈ ಶಾಲೆಗಿಲ್ಲ ಸ್ವಂತ ಕಟ್ಟಡ.. ದೇಗುಲದ ಸಮುದಾಯ ಭವನದಲ್ಲೇ ಮಕ್ಕಳಿಗೆ ಪಾಠ! - ವಿಜಯನಗರದ ಬೈಲುವದ್ದಿಗೇರಿ ಹೈಸ್ಕೂಲ್ ಕಟ್ಟಡ ಸಮಸ್ಯೆ

ವಿಜಯನಗರ ಜಿಲ್ಲೆಯ ಬೈಲುವದ್ದಿಗೇರಿ ಗ್ರಾಮದ ಹೈಸ್ಕೂಲ್ ಕಟ್ಟಡಗಳು ಹೆದ್ದಾರಿಯಾಗಿ ನೆಲಸಮಗೊಂಡಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ.

ದೇಗುಲದ ಸಮುದಾಯ ಭವನದಲ್ಲೇ ಮಕ್ಕಳಿಗೆ ಪಾಠ
ದೇಗುಲದ ಸಮುದಾಯ ಭವನದಲ್ಲೇ ಮಕ್ಕಳಿಗೆ ಪಾಠ

By

Published : Jun 2, 2022, 5:40 PM IST

ವಿಜಯನಗರ: ಸರ್ಕಾರಗಳು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಎಲ್ಲಿಲ್ಲದ ಸವಲತ್ತು ಕೊಟ್ಟಿದ್ದೇವೆ ಅಂತ ಪುಂಖಾನುಪುಂಖವಾಗಿ ಭಾಷಣ ಮಾಡುತ್ತಿವೆ. ಆದರೆ, ವಿಜಯನಗರ ಜಿಲ್ಲೆಯ ಬೈಲುವದ್ದಿಗೇರಿ ಗ್ರಾಮದ ಹೈಸ್ಕೂಲ್ ಕಟ್ಟಡಗಳು ಹೆದ್ದಾರಿಯಾಗಿ ನೆಲಸಮಗೊಂಡಿವೆ. ಪರಿಣಾಮ ಬೀದಿಗೆ ಬಿದ್ದ ವಿದ್ಯಾರ್ಥಿಗಳು ಬಿಸಿಲು ಮಳೆ ಲೆಕ್ಕಿಸದೇ ಮರಗಳ ನೆರಳನ್ನ ಆಶ್ರಯಿಸಿ ಪಾಠ ಕೇಳುವ ದುಃಸ್ಥಿತಿ ಬಂದಿದೆ.

ಕಟ್ಟಡವಿಲ್ಲದಿರುವುದರ ಸಂಕಷ್ಟದ ಬಗ್ಗೆ ವಿದ್ಯಾರ್ಥಿನಿ ಮಾತನಾಡಿರುವುದು

ಇದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ತವರು ಕ್ಷೇತ್ರ. ಆದರೆ ಇಲ್ಲಿ ಕಲಿಯೋ ಮಕ್ಕಳಿಗೆ ಕನಿಷ್ಠ ಶಾಲಾ ಕೊಠಡಿಯೂ ಇಲ್ಲದಿರೋದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಸ್ವಂತ ಶಾಲಾ ಕಟ್ಟಡವಿಲ್ಲದೇ ಬೈಲುವದ್ದಿಗೇರಿ ಗ್ರಾಮದ 9 ಮತ್ತು10ನೇ ತರಗತಿ ವಿದ್ಯಾರ್ಥಿಗಳ ಪಾಡು ಹೇಳತೀರದು. ರಾಷ್ಟ್ರೀಯ ಹೆದ್ದಾರಿ-67ರ ರಸ್ತೆ ವಿಸ್ತರಣೆಗಾಗಿ ಇದ್ದ ಮೂರು ಸುಸಜ್ಜಿತ ಕೊಠಡಿಗಳನ್ನು ನೆಲಸಮ ಮಾಡಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಉಳಿದಿರುವ ಕೊಠಡಿಗಳಲ್ಲಿ ಮಕ್ಕಳನ್ನು ಓದಿಸಲಾಗುತ್ತಿದೆ.

ದೇಗುಲದ ಸಮುದಾಯ ಭವನದಲ್ಲಿ ಶಿಕ್ಷಕರಿಂದ ಪಾಠ.. ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 433 ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 100 ಮಕ್ಕಳಿದ್ದಾರೆ. ಈ ಪ್ರೌಢ ಶಾಲೆಯಲ್ಲಿ ಸ್ವಂತ ಶಾಲಾ ಕಟ್ಟಡವಿಲ್ಲದ್ದರಿಂದ ದೇವಸ್ಥಾನದ ಆವರಣದಲ್ಲಿ ಪಾಠ, ಪ್ರವಚನ ಆಲಿಸುವ ಸ್ಥಿತಿ ಇದೆ. ಮೇ 16ರಿಂದ ಶಾಲೆಗಳು ಪುನರಾಂಭವಾಗಿದ್ದು, ಒಂಬತ್ತು ಹಾಗೂ ಹತ್ತನೆ ತರಗತಿ ಮಕ್ಕಳಿಗೆ ಪಾಠ ಕೇಳಲು ಕೊಠಡಿ ಇಲ್ಲದಂತಾಗಿದೆ. ಹಾಗಾಗಿ, ದೇಗುಲದ ಆವರಣದಲ್ಲೇ ಪಾಠ ಆಲಿಸುವಂತಾಗಿದೆ. ಮಳೆ, ಗಾಳಿ ಬಂದರೆ ದೇಗುಲದ ಸಮುದಾಯ ಭವನದಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ.

ಈ ಶಾಲೆಯಲ್ಲಿ 433 ಮಕ್ಕಳ ಪೈಕಿ ಒಂಬತ್ತು ಮತ್ತು ಹತ್ತನೆ ತರಗತಿಯಲ್ಲಿ 100 ಮಕ್ಕಳು ನೋಂದಣಿಯಾಗಿದ್ದಾರೆ. ಮಕ್ಕಳು ಮರಗಳಡಿಯಲ್ಲಿ ನಿತ್ಯ ಪಾಠ ಆಲಿಸುತ್ತಿರುವುದನ್ನು ಕಂಡು ಪಾಲಕರು ಚಿಂತಿತರಾಗಿದ್ದಾರೆ. ದೇವಸ್ಥಾನದಲ್ಲಿ ಆಗಾಗ ವಿವಾಹ ಕಾರ್ಯಕ್ರಮಗಳು, ಜಾತ್ರೆ ಮಹೋತ್ಸವ, ಸಭೆ, ಸಮಾರಂಭಗಳು ನಡೆಯುವುದು ವಾಡಿಕೆ. ಈ ದಿನಗಳಲ್ಲಿ ಶಿಕ್ಷಕರು, ಮಕ್ಕಳಿಗೆ ಶಾಲೆ ರಜೆ ಘೋಷಣೆ ಮಾಡುತ್ತಾರೆ. ಇದರಿಂದ ಮಕ್ಕಳು ಕಲಿಕೆಯಿಂದ ಹಿಂದೆ ಬೀಳುವ ಪರಿಸ್ಥಿತಿ ಎದುರಾಗಿದೆ.

ಮಕ್ಕಳ ಕಲಿಕೆಗೆ ಪೂರಕ ವಾತವರಣವಿಲ್ಲ.. ಶಾಲಾ ಮಕ್ಕಳಿಗೆ ಶೌಚಾದಿ ಕ್ರಿಯೆಗಳಿಗೂ ಬಯಲೇ ಆಸರೆಯಾಗಿದೆ. ಇಸ್ಕಾನ್‌ನಿಂದ ಬಿಸಿಯೂಟ ಬರುತ್ತಿದೆ. ಈ ಊಟವನ್ನು ದೇಗುಲದ ಆವರಣದಲ್ಲೇ ಮಕ್ಕಳು ಉಣ್ಣುವಂತಾಗಿದೆ. ವಿದ್ಯಾರ್ಥಿಗಳು ಎಲ್ಲಿ ಅನಾರೋಗ್ಯಕ್ಕೀಡಾಗುವರೋ ಎನ್ನುವ ಭೀತಿ ಪಾಲಕರನ್ನು ಕಾಡುತ್ತಿದೆ. ಹೆದ್ದಾರಿ ಪಕ್ಕದಲ್ಲೇ ಮಠ ಇರುವುದರಿಂದ ಮಕ್ಕಳ ಕಲಿಕೆಗೆ ಪೂರಕ ವಾತವರಣವಿಲ್ಲ. ಮಠಕ್ಕೆ ಆಗಮಿಸುವ ಭಕ್ತರ ಗದ್ದಲ ಒಂದೆಡೆಯಾದರೆ, ರಸ್ತೆಯಲ್ಲಿ ಎಡಬಿಡದೇ ಸಂಚಾರ ಮಾಡುವ ವಾಹನ ಸಂಚಾರದಿಂದ ಕೇಳಿದ ಪಾಠವೇ ಅರ್ಥವಾಗುವುದಿಲ್ಲ ಎಂಬುದು ಮಕ್ಕಳ ಅಳಲು.

ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಈ ಕುರಿತು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಚಿವ ಆನಂದ ಸಿಂಗ್ ಈ ಊರು ತಮ್ಮ ಕ್ಷೇತ್ರಕ್ಕೆ ಬರುತ್ತದೋ ಇಲ್ಲವೋ ಎಂದು ಗೊತ್ತಿಲ್ಲದಂತೆ ಇದ್ದಾರೆ. ಕೆಲ ಅಧಿಕಾರಿಗಳು ಕೂಡ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಹೊಸ ಕೊಠಡಿಗಳ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈವರೆಗೂ ಭರವಸೆ ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಗ್ರಾಮಸ್ಥರು.

ಓದಿ:ಹೊಟ್ಟೆ ನೋವಿಗೆ ಔಷಧಿ ಇದೆ, ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ: ಸಿ. ಟಿ ರವಿ ವಾಗ್ದಾಳಿ

For All Latest Updates

ABOUT THE AUTHOR

...view details