ಬೆಂಗಳೂರು: ಪ್ರತ್ಯೇಕ ವಿಜಯನಗರ ಜಿಲ್ಲೆ ರಚಿಸುವ ಸಂಬಂಧ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಪ್ರತ್ಯೇಕ ಜಿಲ್ಲೆಗೆ ಬಿಎಸ್ವೈ ಸೂಚನೆ ಅನರ್ಹ ಶಾಸಕ ಆನಂದ್ ಸಿಂಗ್ ಹಾಗೂ ಉಜ್ಜಿನಿಯ ಪೀಠಾಧೀಶರು, ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಸೆಪ್ಟಂಬರ್ 18ರಂದು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಪ್ರತ್ಯೇಕ ಜಿಲ್ಲೆ ರಚಿಸುವಂತೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿರುವ ಸಿಎಂ, ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಬಳ್ಳಾರಿ ಜಿಲ್ಲೆ ತುಂಬಾ ವಿಸ್ತಾರವಾಗಿದ್ದು, ಒಟ್ಟು 11 ತಾಲೂಕುಗಳನ್ನು ಒಳಗೊಂಡಿದ್ದು, 3 ಕಂದಾಯ ವಿಭಾಗಗಳ ಮೂಲಕ ಅತಿ ದೊಡ್ಡ ಜಿಲ್ಲೆಯಾಗಿದೆ. ಕೇಂದ್ರ ಸ್ಥಾನದಿಂದ 200 ಕಿ.ಮೀ. ಅಂತರದಲ್ಲಿದ್ದು, ಸಾರ್ವಜನಿಕರಿಗೆ ಜಿಲ್ಲೆಯ ಕೇಂದ್ರಕ್ಕೆ ಬಂದು ಹೋಗುವುದಕ್ಕೆ ಕಷ್ಟವಾಗುತ್ತಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ 5 ತಾಲೂಕುಗಳನ್ನು (ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು ಮತ್ತು ಕೂಡ್ಲಗಿ ) ಅನ್ನು ಉಳಿಸಿಕೊಂಡು ಉಳಿದ ಆರು ತಾಲೂಕುಗಳನ್ನು (ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ) ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿ ರೂಪಿಸುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸುವಂತೆ ಸಿಎಂ ಸೂಚಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆನಂದ್ ಸಿಂಗ್ ಬಂಡಾಯವೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.