ಕರ್ನಾಟಕ

karnataka

By

Published : Jul 5, 2022, 8:30 PM IST

ETV Bharat / state

ಬಾಲಕನ ಅಪಹರಣ ಪ್ರಕರಣ: ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳ ಬಂಧನ

ಹಗರಿಬೊಮ್ಮನಹಳ್ಳಿ ಹಳೆ ಊರಿನ ನೀರಾವರಿ ಇಲಾಖೆಯ ಆವರಣದಲ್ಲಿ ಆಟ ಆಡುತ್ತಿದ್ದ ಐದು ವರ್ಷದ ಬಾಲಕನ ಅಪಹರಣ ಮಾಡಲಾಗಿತ್ತು. ಬಳಿಕ ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Kidnapping of a boy demanding money
ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳ ಬಂಧನ

ವಿಜಯನಗರ:ಹಣಕ್ಕಾಗಿ ಬೇಡಿಕೆ ಇಟ್ಟು ಬಾಲಕನನ್ನು ಅಪಹರಿಸಿದ್ದ ಪ್ರಕರಣದ ಆರೋಪಿಗಳನ್ನು, ದೂರು ದಾಖಲಾದ 24 ಗಂಟೆಯೊಳಗೆ ಬಂಧಿಸುವಲ್ಲಿ ವಿಶೇಷ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಗರಿಬೊಮ್ಮನಹಳ್ಳಿಯ ಅಲ್ಲಾಭಕ್ಷಿ ಕರೀಂ ಸಾಬ್ (25), ಹಗರಿಬೊಮ್ಮನಹಳ್ಳಿ ತಾಲೂಕಿನ ಹಲಗಾಪುರದ ಚನ್ನಬಸವ ಸೋಮಪ್ಪ (26), ಕೊಟ್ರೇಶ ಜಂಬಪ್ಪ (23), ಕೇಶವರಾಯನಬಂಡಿಯ ರಮೇಶ ದೊಡ್ಡನಿಂಗಪ್ಪ (22), ಬಸವರಾಜ ನಿಂಗಪ್ಪ (22), ಹಂಪಾಪಟ್ಟಣದ ರವಿ ನಿಂಗಪ್ಪ (38) ಬಂಧಿತರು. ಬಂಧಿತರಿಂದ 7 ಮೊಬೈಲ್, ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೂಡ್ಲಿಗಿ ಡಿವೈಎಸ್ಪಿ ಜಿ. ಹರೀಶ್, ಹಗರಿಬೊಮ್ಮನಹಳ್ಳಿ ಸಿಪಿಐ ಟಿ. ಮಂಜಣ್ಣ, ಪಿಎಸ್‌ಐ ಪಿ. ಸರಳಾ, ಕೂಡ್ಲಿಗಿ ಸಿಪಿಐ ವಸಂತ ಅಸೋದೆ, ತಂಬ್ರಹಳ್ಳಿ ಠಾಣೆ ಪಿಎಸ್‌ಐ ನಾರಾಯಣ ಹಾಗೂ ಚಿತ್ತವಾಡ್ಗಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಪ್ರಕಾಶ್, ಮರಿಯಮ್ಮನಹಳ್ಳಿ ಠಾಣೆ ಪಿಎಸ್‌ಐ ಹನುಮಂತಪ್ಪ ಅವರನ್ನು ಒಳಗೊಂಡ ಮೂರು ತನಿಖಾ ತಂಡಗಳು ಕಾರ್ಯಾಚರಣೆ ನಡೆಸಿ, ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ಪ್ರಕರಣದ ವಿವರ: ಹಗರಿಬೊಮ್ಮನಹಳ್ಳಿ ಹಳೆ ಊರಿನ ನೀರಾವರಿ ಇಲಾಖೆಯ ಆವರಣದಲ್ಲಿ ಆಟ ಆಡುತ್ತಿದ್ದ ಐದು ವರ್ಷ ವಯಸ್ಸಿನ ಅದ್ವಿಕ್‌ನನ್ನು ಭಾನುವಾರ ಸಂಜೆ (ಜು.3ರಂದು) ಅಪಹರಿಸಲಾಗಿತ್ತು. ಬಾಲಕನ ತಂದೆ ಈ. ರಾಘವೇಂದ್ರ ಅವರಿಗೆ ಅಪಹರಣಕಾರರು ಕರೆ ಮಾಡಿ 15 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರಲ್ಲದೇ, ಹಣ ನೀಡದಿದ್ದರೆ ಬಾಲಕನಿಗೆ ಪ್ರಾಣ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಮುಂಗಡವಾಗಿ 3 ಲಕ್ಷ ರೂ. ನೀಡಬೇಕು ಎಂದು ತಿಳಿಸಿದ್ದರು. ಪೋಷಕರು ಈ ವಿಷಯ ಪೊಲೀಸರ ಗಮನಕ್ಕೆ ತಂದಿದ್ದರು. ಬಾಲಕನ ಅಜ್ಜ ಈ. ಕೃಷ್ಣಮೂರ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ತದನಂತರ ವಿಜಯನಗರ ಜಿಲ್ಲಾ ಎಸ್ಪಿ ತನಿಖಾ ತಂಡ ರಚಿಸಿದ್ದರು.

ಇದನ್ನೂ ಓದಿ:ವಿಜಯನಗರ ಬಾಲಕನ ಅಪಹರಣ ಪ್ರಕರಣ: ಪೊಲೀಸರ ಕಾರ್ಯಾಚರಣೆಯಿಂದ ಸುಖಾಂತ್ಯ

ಅಪಹರಣಕಾರರು ಹಗರಿಬೊಮ್ಮನಹಳ್ಳಿಯ ಮೋರಿಗೇರಿ ಕ್ರಾಸ್‌ನ ಉಲವತ್ತಿ ಗ್ರಾಮದ ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಅಡಗಿ ಕುಳಿತ್ತಿದ್ದರು. ಬಾಲಕನ ತಂದೆ ರಾಘವೇಂದ್ರ ಅವರು ಪತ್ನಿಯೊಂದಿಗೆ ಹಣದ ಸಮೇತ ಅಲ್ಲಿಗೆ ತೆರಳಿದ್ದರು. ಅವರೊಂದಿಗೆ ಪೊಲೀಸರು ಹಳ್ಳಿಗರಂತೆ ವೇಷ ಧರಿಸಿ ಅವರ ಬಳಿ ತೆರಳುತ್ತಿದ್ದಂತೆ ಅಪಹರಣಕಾರರು, ಬಾಲಕ ಮತ್ತು ಬೈಕ್ ಬಿಟ್ಟು ಪರಾರಿಯಾಗಿದ್ದರು.

ಬಳಿಕ ಬಾಲಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದ. ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದರಲ್ಲದೇ, ಈಗ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಎಸ್ಪಿ ಡಾ.ಅರುಣ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದಿಸಿದ್ದಾರೆ.

ABOUT THE AUTHOR

...view details