ಹೊಸಪೇಟೆ: ಆರ್.ಆರ್. ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ನಮ್ಮ ಗೆಲುವಿನ ಕುರಿತು ಈ ಹಿಂದೆಯೇ ಸ್ಪಷ್ಟವಾಗಿ ಹೇಳಲಾಗಿತ್ತು. ಅದರಂತೆ ಈ ಕ್ಷೇತ್ರಗಳಲ್ಲಿ ಸದ್ಯ ಮುನ್ನಡೆ ಸಾಧಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ತಿಳಿಸಿದರು.
ತಾಲೂಕಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಎರಡೂ ಕ್ಷೇತ್ರದಲ್ಲಿನ ಜನರು ಬೆಂಬಲ ನೀಡಿದ್ದಾರೆ. ಬಿಹಾರ ಚುನಾವಣೆಯಲ್ಲಿಯೂ ನಮ್ಮ ಪಕ್ಷ ಗೆಲ್ಲಲಿದೆ. ಪೂರ್ಣಪ್ರಮಾಣದ ಫಲಿತಾಂಶ ಬರಬೇಕಾಗಿದ್ದು, ಕಾದು ನೋಡೋಣ ಎಂದು ಹೇಳಿದರು.
ಡಿಸಿಎಂ ಡಾ. ಅಶ್ವತ್ಥ ನಾರಾಯಣ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿರುವುದು ಕೇವಲ ಒಬ್ಬರಿಂದಲ್ಲ. ಕೇವಲ ಓರ್ವನಿಂದ ಗೆಲುವು ನಿರ್ಣಯವಾಗುವುದಿಲ್ಲ. ಗೆಲುವಿನಲ್ಲಿ ಎಲ್ಲರ ಶ್ರಮ ಅಡಗಿದೆ. ಪಕ್ಷ ಹಾಗೂ ಸರ್ಕಾರ ಮಾಡಿದ ಕಾರ್ಯಗಳಿಂದ ಗೆಲುವು ಸಿಗಲಿದ್ದು, ಓರ್ವ ವ್ಯಕ್ತಿಯಿಂದ ಮಾತ್ರ ಪಕ್ಷವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಹೆಸರನ್ನು ಉಲ್ಲೇಖಿಸದೆ ಸ್ಪಷ್ಟನೆ ನೀಡಿದರು.
ಬಿಜೆಪಿ ಎಲ್ಲರಿಗೂ ಸಲ್ಲುವಂತಹ ಪಕ್ಷ. ಜಾತಿ ರಾಜಕಾರಣ ಮಾಡುವುದಿಲ್ಲ. ನಿಸ್ವಾರ್ಥವಾಗಿ ಕೆಲಸವನ್ನು ಮಾಡಬೇಕಾಗುತ್ತದೆ. ಕುಟುಂಬಕ್ಕೆ ಸೀಮಿತವಾದ ರಾಜಕಾರಣ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಡಿಸಿಎಂ ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿರುವುದು ತಿಳಿದಿಲ್ಲ. ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಿದ್ದಾರೆ. ಕಾದು ನೋಡಿ ಎಂದರು.
ನವೆಂಬರ್ 17 ರಿಂದ ಪದವಿ ಕಾಲೇಜುಗಳು ಆರಂಭವಾಗಲಿವೆ. ಈ ಹಿನ್ನೆಲೆ ಯುಜಿಸಿ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್ ನೆಗೆಟಿವ್ ವರದಿ ಬಂದವರಿಗೆ ಪ್ರವೇಶವನ್ನು ನೀಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಅಶ್ವತ್ಥ್ ನಾರಾಯಣ ಹೇಳಿದರು.
ಬೆಂಗಳೂರು ವಿವಿಯ ಪ್ರೊ. ಅಶೋಕ ಕುಮಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಧಿಸಿದಂತೆ ಸಾವಿನ ಪತ್ರದಲ್ಲಿರುವುದು ಏನು?, ಡಿಕೆಶಿ ಅವರಿಗೆ ಪ್ರತ್ಯೇಕವಾಗಿ ಪತ್ರ ಹೋಗಿದೆಯಾ?, ಡಿಕೆಶಿ ಮನಬಂದತೆ ಮಾತನಾಡುವುದು ಸರಿಯಲ್ಲ. ಅರ್ಹತೆ ಹಾಗೂ ಪಾರದರ್ಶಕತೆಗಾಗಿ ಉಪಸಮಿತಿಗಳನ್ನು ರಚಿಸಿ ಆಯ್ಕೆ ಮಾಡಲಾಗುತ್ತಿದೆ. ಭ್ರಷ್ಟಾಚಾರ ರಹಿತ ಕೆಲಸ ಮಾಡಲಾಗುತ್ತಿದೆ. ಅವರು ನಮಗೆ ಬೆರಳು ತೋರಿಸುವಂತಿಲ್ಲ ಎಂದು ತಿರುಗೇಟು ನೀಡಿದರು.