ಬಳ್ಳಾರಿ :ಮುಂಬರುವ ವಿಧಾನಸಭಾ ಚುನಾವನಣೆ ಹಿನ್ನೆಲೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ ಇಲ್ಲಿ ರಾಜ್ಯ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶವನ್ನು ಹಮ್ಮಿಕೊಂಡಿದೆ. ಬಿಲ್ಲಿನಿಂದ ಬಾಣವನ್ನು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಡ್ಡಾ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜೆ.ಪಿ. ನಡ್ಡಾ, ರಾಜಕೀಯದಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಬಹಳ ವರ್ಷಗಳಿಂದ ನಿಮ್ಮನ್ನು ಕೇವಲ ಮತಬ್ಯಾಂಕ್ ಅಗಿ ಮಾಡಿಕೊಂಡು ಯಾವುದೇ ಸವಲತ್ತುಗಳನ್ನು ನೀಡದೆ ಸಂಪತ್ತು ಲೂಟಿ ಮಾಡಿದರು. ಕಳೆದ 60 ವರ್ಷಗಳಲ್ಲಿ ಯಾಕೆ ಒಬ್ಬ ಪರಿಶಿಷ್ಟ ಜನಾಂಗದ ಜನರನ್ನು ಗುರುತಿಸಲಿಲ್ಲ ಎಂದು ಕಾಂಗ್ರೆಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಪ.ಪಂ. ಮಹಿಳೆಗೆ ರಾಷ್ಟ್ರಪತಿ ಸ್ಥಾನ :ನರೇಂದ್ರ ಮೋದಿ ಪರಿಶಿಷ್ಟ ಪಂಗಡದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಪ್ರಾತಿನಿಧ್ಯತೆ ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿಯನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ. ಎಸ್ಟಿ ಸಮುದಾಯ ಮೀಸಲಾತಿ ಪಡೆಯಲು 60 ವರ್ಷ ಕಾಯಬೇಕಿತ್ತಾ?. ಎಸ್ಟಿ ಮೀಸಲಾತಿಯನ್ನು ಮೂರು ಪರ್ಸೆಂಟ್ನಿಂದ ಏಳು ಪರ್ಸೆಂಟ್ಗೆ ಏರಿಕೆ ಮಾಡಲಾಗಿದೆ. ಇದಕ್ಕೆ ಬೊಮ್ಮಾಯಿ ಮತ್ತು ಸಚಿವ ಶ್ರೀರಾಮುಲು ಅವರನ್ನು ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಅಶೀರ್ವಾದ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲಿರಬೇಕು ಎಂದು ಕೇಳಿಕೊಂಡರು.
ಇದೇ ವೇದಿಕೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಬುಡಕಟ್ಟು ಮತ್ತು ದಲಿತರ ಪರವಾಗಿ ಪಿಎಂ ಉತ್ತಮ ಕಾಳಜಿ ತೋರಿಸುತ್ತಿದ್ದಾರೆ. ಆದಿವಾಸಿ ಪರವಾಗಿ ಎಸ್ಸಿ, ಎಸ್ಟಿ ಪರವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಅದಿವಾಸಿಗಳ ಗ್ರಾಮಗಳನ್ನು ಮಾದರಿ ಗ್ರಾಮ ಮಾಡುವುದು ಬಿಜೆಪಿ ಸಂಕಲ್ಪ. ಈ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಕೆಲಸ ಆರಂಭಿಸಿದೆ ಎಂದರು.