ವಿಜಯನಗರ: ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಕಮಲ ಪಾಳಯವು ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿದೆ. ಇಂದು ಹೊಸಪೇಟೆಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯೇ ಅದಕ್ಕೆ ಸಾಕ್ಷಿಯಾಗಿದೆ.
ಬೆಳಗ್ಗೆ ಕಮಲಾಪುರದ ದಲಿತ ಮಹಿಳೆ ಯಲ್ಲಮ್ಮ ಕೊಲ್ಲಾರಪ್ಪ ಮನೆಯಲ್ಲಿ ಉಪ್ಪಿಟ್ಟು, ಒಗ್ಗರಣೆ ಮೆಣಸಿನಕಾಯಿ ರೆಡಿ ಮಾಡಿದ್ರು. ಒಗ್ಗರಣೆ ಮಿರ್ಚಿ ಸವಿದ ಸಿಎಂ ಬಸವರಾಜ್ ಬೊಮ್ಮಾಯಿ ಬಳಿಕ ಟೀ ಕುಡಿದ್ರು. ರಾಜಾಹುಲಿ ಯಡಿಯೂರಪ್ಪ, ಕೂಡ ಸಾತ್ ನೀಡಿದ್ರು. ಇದಕ್ಕೂ ಮುನ್ನ ಮನೆಗೆ ಬಂದ ಸಿಎಂಗೆ ಆರತಿ ಮಾಡಿದ ದಲಿತ ಮಹಿಳೆಯ ಆರತಿ ತಟ್ಟೆಗೆ 500 ರೂ. ಗರಿ ಗರಿ ನೋಟು ಹಾಕಿದ್ರು.
ಕಮಲಾಪುರದಿಂದ ನೇರವಾಗಿ ಹೊಸಪೇಟೆಗೆ ಆಗಮಿಸಿದ ಸಿಎಂ, ಏಳೂ ಕೇರಿಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮದಕರಿ ನಾಯಕನ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ರು. ಬಳಿಕ ನಗರ ಕ್ರೀಡಾಂಗಣದಲ್ಲಿ ಜನ ಸಂಪರ್ಕ ಯಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಅನೇಕ ಬಿಜೆಪಿ ನಾಯಕರು ಭಾಷಣ ಮಾಡಿದರು.
ಹೊಸಪೇಟೆಯಲ್ಲಿ ಜನಸಂಕಲ್ಪ ಯಾತ್ರೆ ಜನಸಂಕಲ್ಪ ಯಾತ್ರೆ:ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಭಾಷಣ ಮಾಡಿದ್ದು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂಕಲ್ಪ ಮಾಡಿದ್ದೇವೆ. ನಾನು ರಾಹುಲ್ ಗಾಂಧಿಗೆ ಬಚ್ಚಾ ಅಂದಿದ್ದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರನ್ನು ಬಚ್ಚಾ ಅಂತ ನಾನು ಕರೆದಿದ್ದು ಸರಿಯಲ್ಲ ಅಂತ ಸಿದ್ದರಾಮಯ್ಯ ಅವರು ಬೇರೆ, ಬೇರೆ ಮಾತುಗಳು ಕೂಡ ಆಡಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಕ್ಕೆ ನಾನು, ಬಚ್ಚಾ ಅನ್ನೋ ಪದ ಬಳಸಿದ್ದೇನೆ. ಅದು ರಾಹುಲ್ ಗಾಂಧಿಯವರೇ, ಹಾಗೆ ಮಾತನಾಡೋ ಹಾಗೆ ಮಾಡಿಕೊಂಡ್ರು. ಪ್ರಧಾನಿ ಮೋದಿ ಬಗ್ಗೆ ಯಾರೇ ಮಾತನಾಡಿದ್ರು, ನೀವು ಪ್ರತಿಭಟಿಸಬೇಕು ಅಂತ ಭಾಷಣದ ಸಮಯದಲ್ಲಿ ಬಿ. ಎಸ್ ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ:ಯಡಿಯೂರಪ್ಪ ಈಗಲೂ ರಾಜ್ಯದ ಜನರ ಮನದಲ್ಲಿದ್ದಾರೆ. ನಿನ್ನೆ ರಾಜಾಹುಲಿ ಗರ್ಜನೆಗೆ ಕಾಂಗ್ರೆಸ್ನವರು ತತ್ತರಿಸಿದ್ದಾರೆ. ಯಡಿಯೂರಪ್ಪಗೆ ಅರಳು ಮರಳು ಅಂತಾರೆ ಸಿದ್ದರಾಮಯ್ಯ. ಯಡಿಯೂರಪ್ಪ ಯಾವತ್ತೂ ಜಗ್ಗಲ್ಲ ಕುಗ್ಗಲ್ಲ. ಯಡಿಯೂರಪ್ಪ ಯಾವತ್ತೂ ಅರಳು, ಅವರು ಮರಳಲ್ಲ. ಯಡಿಯೂರಪ್ಪ ಈಗಲೂ ರಾಜ್ಯದ ಜನರ ಮನದಲ್ಲಿದ್ದಾರೆ ಎಂದರು.
ಸಿದ್ದರಾಮಯ್ಯ ಹೇಳಿಕೆ ನೋಡಿದ್ರೆ ಅವರಿಗೆ ಅರಳು ಮರಳು ಆದಂತೆ ಕಾಣುತ್ತಿದೆ. ದೇಶದಲ್ಲಿ ಕೋವಿಡ್ ವೈರಸ್ ನಿಯಂತ್ರಣ ಮಾಡಿದ್ದೇವೆ. ಪ್ರಧಾನಿ ಮೋದಿ ಪ್ರವಾಹ ಬಂದ್ರೆ ಸಹಾಯ ಮಾಡುತ್ತಾರೆ. ಉದ್ಯೋಗ ಯೋಜನೆ ಸೇರಿ ಹಲವು ಯೋಜನೆ ಜಾರಿ ಮಾಡಿದ್ದಾರೆ. ಸಿದ್ದರಾಮಣ್ಣ ಮರಳು ನಿಮಗೆ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರದ್ದು ವಿತಂಡವಾದ: ಬಿಎಸ್ವೈ ಅವರನ್ನ ಅಧಿಕಾರದಿಂದ ಇಳಿಸಲು ಏನೆಲ್ಲಾ ಮಾಡಿದ್ರೀ ಗೊತ್ತಿದೆ. ಕೇಸ್ ಹಾಕಿಸಿದ್ರು ಶಾಶ್ವತವಾಗಿ ಅಧಿಕಾರದಿಂದ ದೂರ ಇಡಲು ಯತ್ನಿಸಿದ್ರು. ಕರ್ನಾಟಕದ ಹೃದಯ ಸಿಂಹಾಸನದಲ್ಲಿ ಬಿಎಸ್ವೈ ಇದ್ದಾರೆ. ಸಿದ್ದರಾಮಯ್ಯ ಅವರದ್ದು ವಿತಂಡ ವಾದ ಮಾಡುತ್ತಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಆನಂದ್ ಸಿಂಗ್ ಶ್ರೀರಾಮುಲು ಸೇರಿದಂತೆ ವೇದಿಕೆಯ ಮೇಲೆ ಗಣ್ಯರನ್ನು ಹಾಡಿ ಹೊಗಳಿದ ಬಳಿಕ, ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಗಳಲ್ಲಿ 10 ಕ್ಷೇತ್ರದಲ್ಲಿ BJP ಬಾವುಟ ಹಾರಿಸುತ್ತೇವೆ ಅಂತ ಹೇಳಿದ್ರೆ, ಸಚಿವ ಶ್ರೀರಾಮುಲು ಕೂಡ ಅಭಿವೃದ್ಧಿ ಕುರಿತು ಮಾತನಾಡಿ, ಕಾಂಗ್ರೆಸ್ ನ ವಿರುದ್ಧ ಹರಿಹಾಯ್ದರು. ರಾಹುಲ್ ಗಾಂಧಿಯ ಪಾದಯಾತ್ರೆ ಯಾವ ಉದ್ದೇಶಕ್ಕಾಗಿ ಅಂತ ಪ್ರಶ್ನೆ ಮಾಡಿದ್ರು ಶ್ರೀರಾಮುಲು.
ಜಾರಕಿಹೊಳಿಗೆ ಪರೋಕ್ಷ ಟಾಂಗ್ ಕೊಟ್ಟ ರಾಜೂಗೌಡ:ಶಾಸಕ ರಾಜೂಗೌಡ ಮೀಸಲಾತಿ ವಿಚಾರದಲ್ಲಿ ಪರೋಕ್ಷವಾಗಿ ಜಾರಕಿಹೋಳಿಗೆ ಟಾಂಗ್ ಕೊಟ್ರು. ಇನ್ನೂ ಸಚಿವ ಆನಂದ್ ಸಿಂಗ್, ಶ್ರೀರಾಮುಲು, ಶಾಸಕ ರಾಜೂಗೌಡ ಮೀಸಲಾತಿ ಕೊಡಿಸಿದ್ದು ಬಿಜೆಪಿ ಸರ್ಕಾರ ಅಂತ ಹಾಲಿ, ಮಾಜಿ ಸಿಎಂಗಳನ್ನು ಹಾಡಿ ಹೊಗಳಿ , ಪ. ಜಾ, ಪ. ಪಂಗಡ ಸಮುದಾಯದವರು, ಬಿಜೆಪಿ ಜತೆ ಇರಬೇಕು ಅಂತ ಮಂತ್ರ ಹಾಡಿದ್ರು.
ಜನ ಸಂಕಲ್ಪ ಯಾತ್ರೆಯೂದ್ದಕ್ಕೂ ಹಾಲಿ, ಮಾಜಿ ಸಿಎಂಗಳು ಸೇರಿದಂತೆ ವೇದಿಕೆಯ ಮೇಲಿರುವ ಗಣ್ಯರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಷ್ಟು ವರ್ಷಗಳ ಕಾಲ ಇದ್ದ ಕಾಂಗ್ರೆಸ್ ಎಸ್ಸಿ, ಎಸ್ಟಿಗಳಿಗೆ ಏನೂ ಸಹ ಮಾಡಲಿಲ್ಲ, ಸರ್ವ ಪಕ್ಷದ ಸಭೆಯಲ್ಲಿ ಒಪ್ಪಿಗೆ ಕೊಟ್ಟು, ಹೊರಗಡೆ ಬಂದು ನಾಟಕ ಮಾಡ್ತಾರೆ ಅಂತ ಹೇಳುವುದರ ಜತೆಗೆ ಕಾಂಗ್ರೆಸ್ ಜೋಡೋ ಯಾತ್ರೆಯ ವಿರುದ್ಧ ಮಾತನಾಡಿದ್ರು.
ಇನ್ನೂ ವಿಜಯನಗರ ಜಿಲ್ಲೆ ಮಾಡಿದ್ದಕ್ಕೆ ಪ್ರತಿಫಲವಾಗಿ ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ- ವಿಜಯನಗರ ಅವಿಭಜಿತ ಜಿಲ್ಲೆಗಳ 10 ಕ್ಷೇತ್ರಗಳಲ್ಲಿ ಕೇಸರಿ ಬಾವುಟ ಹಾರಿಸಿ ಅಂತ ಮಾಜಿ ಸಿಎಂ ಯಡಿಯೂರಪ್ಪ ಟಾಸ್ಕ್ ಕೊಟ್ಟು ಹೋದ್ರು.
ಓದಿ:ಬಿ ವೈ ರಾಘವೇಂದ್ರ ಖಾತೆಯಿಂದ 19 ಲಕ್ಷ ರೂ ಕನ್ನ : ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಸಂಸದ