ಎತ್ತಿನ ಬಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಮೆರವಣಿಗೆ ವಿಜಯನಗರ :ನಾಮಪತ್ರ ಸಲ್ಲಿಸುವುದಕ್ಕೂ ಮುನ್ನಎತ್ತಿನ ಬಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಮೆರವಣಿಗೆ ನಡೆಸುತ್ತಿದ್ದಾಗ ಎತ್ತುಗಳು ಬೆದರಿ ಓಡಿದ್ದು, ಹಲವರು ಗಾಯಗೊಂಡರು. ಸಚಿವ ಆನಂದ್ ಸಿಂಗ್ ಅವರ ಮಗ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಇಂದು ನಾಮಪತ್ರ ಸಲ್ಲಿಸಿದರು.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಿಂದ ಉಪವಿಭಾಗಿಯ ಕಚೇರಿವರೆಗೆ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮೆರವಣಿಗೆಯಲ್ಲಿ ವಿವಿಧ ರೀತಿಯ ಕಲಾ ತಂಡಗಳು ಕಂಡುಬಂದವು. ಅಲಂಕೃತಗೊಂಡ ಎತ್ತಿನ ಬಂಡಿಯಲ್ಲಿ ನಿಂತು ಸಿದ್ಧಾರ್ಥ ಸಿಂಗ್ ಜನರ ಗಮನ ಸೆಳೆದರು. ಜನರ ಕೂಗಾಟದಿಂದ ಎತ್ತುಗಳು ಬೆದರಿ ಓಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಜನರನ್ನು ಚದುರಿಸಲು ಪೊಲೀಸರು ಹರಸಹಾಸಪಟ್ಟರು.
ತಕ್ಷಣ ಸಿದ್ಧಾರ್ಥ ಸಿಂಗ್ ಅವರನ್ನು ಬೆಂಬಲಿಗರು ಎತ್ತಿನ ಬಂಡಿಯಿಂದ ಕೆಳಕ್ಕಿಳಿಸಿದರು. ಈ ಹಿಂದೆಯೂ ಕೂಡ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಇದೇ ಎತ್ತಿನಬಂಡಿಯನ್ನು ತರಿಸಲಾಗಿತ್ತು. ಅಂದೂ ಕೂಡ ಜನರನ್ನು ನೋಡಿ ಎತ್ತುಗಳು ಗಾಬರಿಯಾಗಿದ್ದವು.
ಶಾಸಕ ಬಿ.ನಾಗೇಂದ್ರ ನಾಮಪತ್ರ ಸಲ್ಲಿಕೆ: ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ನಾಲ್ಕನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ಕನಕ ದುರ್ಗಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಕಾರ್ಯಕರ್ತರೊಂದಿಗೆ ಕೌಲ್ ಬಜಾರ್‌ನಿಂದ ಏಳು ಮಕ್ಕಳ ತಾಯಿ ದೇವಸ್ಥಾನದವರೆಗೆ ರ್ಯಾಲಿ ನಡೆಸಿದರು. ಅಲ್ಲಿಂದ ಎಸಿ ಕಚೇರಿಯವರೆಗೆ ಸ್ಕೂಟರ್‌ನಲ್ಲಿ ಬಂದು ಚುನಾವಣಾಧಿಕಾರಿ ಹೇಮಂತ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ನಾಗೇಂದ್ರಗೆ ಕಾಂಗ್ರೆಸ್ ಕಾರ್ಯಕರ್ತರು ಜೆಸಿಬಿಗಳ ಮೂಲಕ ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಿ ಸಂಭ್ರಮಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಾಗೇಂದ್ರ, ಈ ಬಾರಿ ಜನತೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದು, ಬಳ್ಳಾರಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಮಾಜಿ ಸಂಸದ ಉಗ್ರಪ್ಪ ಹಾಗು ಕಾಂಗ್ರೆಸ್ ಮುಖಂಡ ಭರತ್ ರೆಡ್ಡಿ ಪಾಲಿಕೆಯ ಸದಸ್ಯರು ಇದ್ದರು.
ಇದನ್ನೂ ಓದಿ :ಜಮೀನು ವಿವಾದಕ್ಕಾಗಿ ಕೋರ್ಟ್, ಕಚೇರಿ ಅಲೆದಾಡಿ ಸುಸ್ತು: ಚುನಾವಣಾ ಅಖಾಡಕ್ಕಿಳಿದ 60ರ ಮಹಿಳೆ!