ಬಳ್ಳಾರಿ : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಬಿ.ಶ್ರೀರಾಮುಲು ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಶ್ರೀರಾಮುಲು ಕೋಟೆ ಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿ ಹೇಮಂತ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಡೊಳ್ಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾದವು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಆರನೇ ಬಾರಿಗೆ ವಿಧಾನಸೌಧ ಪ್ರವೇಶಿಸಲು ನಾಮಪತ್ರ ಸಲ್ಲಿಸುತ್ತಿದ್ದು, ಅತ್ಯಧಿಕ ಬಹುಮತದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆಗೆ ಮೊದಲು ಭರತ್ ರೆಡ್ಡಿ ಕನಕದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿ, ಅದ್ಧೂರಿ ಮೆರವಣಿಗೆಯಲ್ಲಿ ಪಾಲಿಕೆ ಕಚೇರಿಗೆ ತಲುಪಿದರು. ಬಳಿಕ ಚುನಾವಣಾಧಿಕಾರಿಯಾಗಿರುವ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ರೆಡ್ಡಿಗೆ ಕಾಂಗ್ರೆಸ್ ಕಾರ್ಯಕರ್ತರು ಜೆಸಿಬಿಗಳ ಮೂಲಕ ಹೂವಿನ ಸುರಿಮಳೆ ಮಾಡಿದರು. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಗ್ರಾಮೀಣ ಶಾಸಕ ನಾಗೇಂದ್ರ, ಪಾಲಿಕೆಯ ಸದಸ್ಯರು ಇದ್ದರು. ರಾಮುಲು ನಾಮಪತ್ರ ಸಲ್ಲಿಸುವ ವೇಳೆ ಶಾಸಕ ಸೋಮಶೇಖರ್ ರೆಡ್ಡಿ, ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದೆ ಶಾಂತಾ ಹಾಗೂ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್‌ಗೆ ಎಂ.ಪಿ.ಲತಾ ಟಕ್ಕರ್:ಟಿಕೆಟ್ ಸಿಕ್ಕಿಲ್ಲವೆಂದು ಮುನಿಸಿಕೊಂಡು ಪಕ್ಷೇತರರಾಗಿ ಸ್ಫರ್ಧೆ ಮಾಡೋದ್ರಲ್ಲಿ ಕಾಂಗ್ರೆಸಿಗರೂ ಹಿಂದೆ ಬಿದ್ದಿಲ್ಲ. ಹರಪ್ಪನಹಳ್ಳಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂಪಿ ಲತಾ ಅವರಿಗೆ ಟಿಕೆಟ್ ನೀಡದೇ ಅರಸೀಕೆರೆ ಕೊಟ್ರೇಶ್ ಅವರಿಗೆ ಕೆಪಿಸಿಸಿ ಟಿಕೆಟ್ ಘೋಷಣೆ ಮಾಡಿದೆ. ಕೆಪಿಸಿಸಿ ನಡೆಯಿಂದ ಅಚ್ಚರಿಗೊಂಡು ಟಿಕೆಟ್ಗಾಗಿ ಕಾಯುತ್ತಿದ್ದ ದಿ.ಎಂ.ಪಿ.ಪ್ರಕಾಶ್ ಅವರ ಪುತ್ರಿ ಎಂ.ಪಿ.ಲತಾ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡುವುದರೊಂದಿಗೆ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ. ಇಂದು ಎಂ.ಪಿ.ಲತಾ ತಮ್ಮ ಸಾವಿರಾರು ಜನ ಬೆಂಬಲಿಗರ ಜೊತೆ ಮೆರವಣಿಗೆ ಮೂಲಕ ಆಗಮಿಸಿ ಹರಪನಹಳ್ಳಿ ತಾಲೂಕು ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಪೊಲೀಸರಿಂದ ಲಾಠಿ ಬಿಸಿ: ಹರಪನಹಳ್ಳಿ ಪಟ್ಟಣದಲ್ಲಿ ಎಂ.ಪಿ.ಲತಾ ಬೆಂಗಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಬೆಂಬಲಿಗರು ಘೋಷಣೆಯನ್ನು ಕೂಗಿದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ರುಚಿ ತೋರಿಸಿದ ಘಟನೆಯೂ ನಡೆಯಿತು.
ಅಕ್ಕ-ತಂಗಿ ಪ್ರತಿಸ್ಪರ್ಧೆ: ದಿ.ಎಂ.ಪಿ ಪ್ರಕಾಶ್ ಅವರ ಪುತ್ರಿಯರಾದ ಎಂ.ಪಿ.ಲತಾ ಹಾಗೂ ವೀಣಾ ಮಹಂತೇಶ್ ಅವರು ಇಬ್ಬರೂ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವೀಣಾ ಮಹಂತೇಶ್ ನಿನ್ನೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದರೆ, ಇತ್ತ ಇಂದು ಎಂ.ಪಿ.ಲತಾ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ :ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರತಿಸ್ಪರ್ಧಿಯಾಗಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ.. ಅವರ ಆಸ್ತಿ ವಿವರ ಹೀಗಿದೆ