ಬಳ್ಳಾರಿ:ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಿನ್ನೆ ಸಂಜೆ ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದು, ಇಂದು ಬೆಳಗ್ಗೆ ಹಲಕುಂದಿ ಮಠದಿಂದ ಯಾತ್ರೆ ಆರಂಭಿಸಿದ್ದಾರೆ. ಬೆಳಗ್ಗೆ 10ಕ್ಕೆ ಯಾತ್ರೆ ಬಳ್ಳಾರಿ ನಗರಕ್ಕೆ ತಲುಪಲಿದ್ದು, ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಮುನ್ಸಿಪಲ್ ಮೈದಾನದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಪಾದಯಾತ್ರೆ ನಂತರ ರಾತ್ರಿ ರಾಹುಲ್ ಗಾಂಧಿ ಬಳ್ಳಾರಿಯ ಸಂಗನಕಲ್ಲು ಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಿನ್ನೆ ಸಂಜೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಬಳ್ಳಾರಿ ಜಿಲ್ಲೆಯ ಗಡಿ ಬಳಿ ಶುಕ್ರವಾರ ಸಂಜೆ ಸ್ವಾಗತಿಸಲಾಗಿತ್ತು. ಪೂರ್ವ ನಿಗದಿತ ಕಾರ‍್ಯಕ್ರಮದಂತೆ ರಾಹುಲ್ ಗಾಂಧಿ ಅಲ್ಲಿಂದ ಸುಮಾರು ನಾಲ್ಕೈದು ಕಿ.ಮೀ ದೂರದಲ್ಲಿರುವ ಹಲಕುಂದಿ ಮಠಕ್ಕೆ ನಡೆದು ಬರಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ನೀಡದೆ ಕಾರನ್ನೇರಿ ಹಲಕುಂದಿ ಮಠಕ್ಕೆ ಪ್ರಯಾಣಿಸಿದ್ದರು.
ರಾಹುಲ್ ಅವರನ್ನು ಬಳ್ಳಾರಿ ಜಿಲ್ಲೆಗೆ ಸ್ವಾಗತಿಸಲು ಕಾದು ನಿಂತಿದ್ದ ಸಾವಿರಕ್ಕೂ ಹೆಚ್ಚು ಕಲಾವಿದರು, ತಮ್ಮ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದರಿಂದ ನಿರಾಶರಾದರು. ಅಲ್ಲದೆ, ಒಂದೇ ಬಣ್ಣದ ಸೀರೆಯುಟ್ಟು ನಿಂತಿದ್ದ ಲೈಂಗಿಕ ಅಲ್ಪಸಂಖ್ಯಾತರು ಪೇಚು ಮೋರೆ ಹಾಕಿಕೊಂಡು ಹಿಂತಿರುಗಿದರು. ಪರ್ಣ ಕುಂಭದೊಂದಿಗೆ ಸ್ವಾಗತಿಸಲು ಸಜ್ಜಾಗಿದ್ದ ಮಹಿಳೆಯರಿಗೂ ರಾಹುಲ್ ಹಣೆಗೆ ತಿಲಕವನ್ನಿಟ್ಟು ಪರ್ಣ ಕುಂಭದೊಂದಿಗೆ ಸ್ವಾಗತಿಸುವ ಅವಕಾಶ ದೊರೆಯಲಿಲ್ಲ.
ತಮ್ಮ ಸ್ವಾಗತಕ್ಕಾಗಿ ಕಲಾವಿದರು ಬಂದಿರುವುದನ್ನು ರಾಹುಲ್ ಗಾಂಧಿ ಅವರಿಗೆ ಪಕ್ಷದ ಹಿರಿಯ ನಾಯಕರು ಹೇಳಿರಲಿಲ್ಲ. ಸಂವಹನ ಕೊರತೆಯಿಂದಾಗಿ ಹೀಗಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಗಡಿ ಭಾಗದಿಂದ ಹಲಕುಂದಿ ಮಠದವರೆಗೂ ರಾಹುಲ್ ಗಾಂಧಿ ಅವರನ್ನು ನೋಡಲು ಕಾದು ಕುಳಿತಿದ್ದ ಜನರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು. ಆ ಸ್ಥಳದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು.