ಬಳ್ಳಾರಿ :ಅ.14 ರಿಂದ 16 ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಭಾರತ್ ಜೋಡೋ ಪಾದಯಾತ್ರೆ ಮಾರ್ಗ ಮತ್ತು ಬಹಿರಂಗ ಸಭೆ ನಡೆಯುವ ಸ್ಥಳಗಳಲ್ಲಿ ಡ್ರೋನ್ ಹಾರಾಟ ನಡೆಸದಂತೆ ತಾತ್ಕಾಲಿಕ ಕೆಂಪು ವಲಯ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ: ಭಾರತ್ ಜೋಡೊ ಯಾತ್ರೆ ಮತು ಬಹಿರಂಗ ಸಮಾವೇಶ ಹಿನ್ನೆಲೆ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಪಾದ ಯಾತ್ರೆ ಮಾಡಲಿದ್ದು, ಅ.14 ರಿಂದ 15 ರವರೆಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗಾಗಿ ಹಾಗೂ ಸಂಚಾರಕ್ಕೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದರು.
3 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ: ರಾಹುಲ್ ಗಾಂಧಿ 14ರಂದು ರಾತ್ರಿ ಹಲಕುಂದಿಗೆ ಆಗಮಿಸಿ ಅಂದು ರಾತ್ರಿ ಅಲ್ಲೇ ವಾಸ್ತವ್ಯ ಮಾಡಿ, 15ರಂದು ಬೆಳಗ್ಗೆ 06 ಗಂಟೆಗೆ ಕಾರ್ಯಕರ್ತರೊಂದಿಗೆ ಹಲಕುಂದಿಯಿಂದ ಪಾದಯಾತ್ರೆ ಮುಖಾಂತರ ಬಳ್ಳಾರಿ ನಗರಕ್ಕೆ ಆಗಮಿಸಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಸದರಿ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದು, ಸುಮಾರು 3 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ನಗರ ಸಂಚಾರ ಮಾರ್ಗದಲ್ಲಿ ಬದಲಾವಣೆ : ಈ ಹಿನ್ನೆಲೆ ನಗರ ವ್ಯಾಪ್ತಿಯ ಹಲವು ರಸ್ತೆಗಳನ್ನು ಒನ್ ವೇ ಮತ್ತು ನಿರ್ಬಂಧ ಹೇರಿ ಮಾರ್ಗ ಬದಲಾವಣೆ ಮಾಡಲಾಗಿದ್ದು, 14 ರಂದು ಮಧ್ಯಾಹ್ನ 4 ಗಂಟೆಯಿಂದ ರಾತ್ರಿ ಹೊಸಪೇಟೆ ಬೈ ಪಾಸ್ ಹಾಗೂ ಬಳ್ಳಾರಿ ಮುಖಾಂತರ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಅನಂತಪುರ ರಸ್ತೆಯ ಜೈ ಪಾಸ್ ಮುಖಾಂತರ ಸಂಚರಿಸಬೇಕು ಎಂದು ಹೇಳಿದರು.